ಡಾಕ್ಟರ್‌ಗಳ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಹರಿದು ಬಂದಿದೆ ಅಪಾರ ಹಣ

ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಖಾತೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ಪತ್ತೆ

ನವದೆಹಲಿ: ಇತ್ತೀಚೆಗೆ ಪೊಲೀಸರು ಬಯಲಿಗೆಳೆದಿರುವ ಡಾಕ್ಟರ್‌ಗಳು ಒಳಗೊಂಡಿರುವ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬಂದಿರುವುದು ತನಿಖೆಯಿಂದ ಬಯಲಾಗಿದೆ. ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಒಂದು ಖಾತೆಗೆ ಸುಮಾರು 20 ಲ.ರೂ. ವರ್ಗಾಯಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ವೈಟ್‌ ಕಾಲರ್‌ ಉಗ್ರರ ಹಣಕಾಸು ವಹಿವಾಟುಗಳ ಕುರಿತು ತೀವ್ರ ತನಿಖೆ ನಡೆಯುತ್ತಿದೆ. ಡಾ.ಉಮರ್‌ ನಬಿ ಅಲಿಯಾಸ್‌ ಡಾ. ಮೊಹಮ್ಮದ್‌ ಉಮರ್‌ ಕಳೆದ ಸೋಮವಾರ ಕೆಂಪುಕೋಟೆ ಬಳಿ ಹುಂಡೈ ಐ20 ಕಾರನ್ನು ಸ್ಫೋಟಿಸಿಕೊಂಡು ಸತ್ತಿದ್ದಾನೆ. ಈ ಸ್ಫೋಟದಲ್ಲಿ ಅವನನ್ನು ಸೇರಿಸಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಟೆರರ್‌ ಡಾಕ್ಟರ್‌ ಉಮರ್ ನಬಿ ಹರಿಯಾಣದ ನೂಹ್‌ ಮಾರುಕಟ್ಟೆಯಲ್ಲಿ ನಗದು ರೂಪದಲ್ಲಿ ಹಣ ಪಾವತಿಸಿ ಭಾರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸಿದ್ದ, ಅದನ್ನು ಬಳಸಿಯೇ ಸ್ಫೋಟಕ ತಯಾರು ಮಾಡಿದ್ದಾನೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹರಿಯಾಣ ಮೂಲದ ಮೂವರು ಹವಾಲಾ ಡೀಲರ್‌ಗಳನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.





















































 
 

ಬಾಂಬ್‌ ಎಕ್ಸ್‌ಪರ್ಟ್‌ ಕೂಡ ಆಗಿದ್ದ ಡಾ.ಉಮರ್‌ ನಬಿ ಇಂಧನ ತೈಲ ಮತ್ತು ಟ್ರಾನ್ಸ್‌ಫಾರ್ಮರ್‌ಗೆ ಬಳಸುವ ಆಯಿಲ್‌ನೊಂದಿಗೆ ಬೆರೆಸಿದ ಅಮೋನಿಯಂ ನೈಟ್ರೇಟ್ ಬಳಸಿ, ಪ್ರಬಲವಾದ ಸ್ಫೋಟಕ ಸಾಧನವನ್ನು ತಯಾರು ಮಾಡಿದ್ದ. ಬಾಂಬನ್ನು 3 MM ಅಥವಾ 9 MM ಬ್ಯಾಟರಿ ಚಾಲಿತ ಟೈಮಿಂಗ್ ಸಾಧನಕ್ಕೆ ತೆಳುವಾದ ಕೇಬಲ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು. ಸರ್ಕ್ಯೂಟ್‌ಗೆ ಹಸ್ತಚಾಲಿತ ಸ್ವಿಚ್ ಅಗತ್ಯವಿತ್ತು, ಉಮರ್ ಸ್ಫೋಟವನ್ನು ಪ್ರಚೋದಿಸಲು ಮನೆಯ ಆನ್-ಆಫ್ ಸ್ವಿಚ್‌ನಂತೆ ಕಾರ್ಯನಿರ್ವಹಿಸಲು ರೆಡಿ ಮಾಡಿದ್ದ. ಈ ಬಾಂಬ್ ಜೋಡಣೆ ಪ್ರಕ್ರಿಯೆಯು ಕೇವಲ 5 ರಿಂದ 10 ನಿಮಿಷದಲ್ಲೇ ಮಾಡಿದ್ದ. ಜೊತೆಗೆ ಸ್ಫೋಟಕ್ಕೆ ಬಳಸುವ ಡಿಟೋನೇಟರ್‌ಗಳನ್ನ ಸಾಮಾನ್ಯ ಕಲ್ಲಿದ್ದಲು ಗಣಿಗಳಿಂದ ಸುಲಭವಾಗಿ ಪಡೆಯಬಹುದು ಎನ್ನಲಾಗಿದೆ. ಮೂರು ಗಂಟೆ ಮಸೀದಿಯ ಪಾರ್ಕಿಂಗ್‌ನಲ್ಲಿ ಕುಳಿತು ಇದನ್ನೆಲ್ಲ ಉಮರ್‌ ಸೆಟ್ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.

ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟದ ತೀವ್ರತೆಯ ಇನ್ನಷ್ಟು ವಿಡಿಯೋಗಳು ಈಗ ಹೊರ ಬರುತ್ತಿದೆ. ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಇಡೀ ಮೆಟ್ರೋ ನಿಲ್ದಾಣದಲ್ಲಿ ಭೂಕಂಪನದ ಅನುಭವ ಉಂಟಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ನಡುವೆ ದೆಹಲಿಯಲ್ಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಾ.ಮುಜಮ್ಮಿಲ್ ಫೋನ್ ಕರೆಗಳ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆ ಹಾಕಿವೆ. ಪ್ರಮುಖ ಶಂಕಿತರಾದ ಡಾ.ಶಾಹೀನ್, ಡಾ.ಮುಜಮ್ಮಿಲ್ ಮತ್ತು ಡಾ.ಆರಿಫ್ ನಡುವೆ ವ್ಯಾಪಕ ಸಂವಹನ ಪತ್ತೆಯಾಗಿದೆ. ನವೆಂಬರ್ 1 ಮತ್ತು ನವೆಂಬರ್ 7ರ ನಡುವೆ, ಡಾ. ಆರಿಫ್ ಮತ್ತು ಡಾ. ಶಾಹೀನ್ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. 39 ಧ್ವನಿ ಕರೆಗಳು. 43 ವಾಟ್ಸಪ್ ಕರೆಗಳು, ಸುಮಾರು 200 ಪಠ್ಯ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರೀಯ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.

ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ಅವರು ಇ-ಮೇಲ್‌ನಲ್ಲಿ ಡ್ರಾಫ್ಟ್‌ ಮೂಲಕ ಸಂವಹನ ನಡೆಸುತ್ತಿದ್ದರು. ಸಂದೇಶ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇ-ಮೇಲ್‌ಗೆ ಹಾಕಿ ಅದನ್ನು ಡ್ರಾಫ್ಟ್‌ ಬಾಕ್ಸ್‌ನಲ್ಲಿ ಸೇವ್‌ ಮಾಡುತ್ತಿದ್ದರು. ಇದನ್ನು ಸಂಬಂಧಪಟ್ಟ ವ್ಯಕ್ತಿ ತೆರೆದು ನೋಡುತ್ತಿದ್ದ. ಈ ತಂತ್ರದ ಮೂಲಕ ಅವರು ಭದ್ರತಾ ಏಜೆನ್ಸಿಗಳ ಕಣ್ತಪ್ಪಿಸಿದ್ದರು.

error: Content is protected !!
Scroll to Top