ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಪಥಸಂಚಲನ ಕಿತ್ತಾಟ
ಬೆಂಗಳೂರು: ಸಾಕಷ್ಟು ಕಾದಾಟಕ್ಕೆ ಸಾಕ್ಷಿಯಾಗಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನ ಇಂದು ಅಪರಾಹ್ನ ನಡೆಯಲಿದೆ. ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು, ಇಡೀ ರಾಜ್ಯದ ಚಿತ್ತ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದತ್ತ ನೆಟ್ಟಿದೆ. ಅಭೂತಪೂರ್ವ ಪೊಲೀಸ್ ಬಂದೋಬಸ್ತಿನಲ್ಲಿ ಪಥಸಂಚಲನ ನಡೆಯಲಿದೆ.
ಕಳೆದೊಂದು ತಿಂಗಳಿಂದ ರಾಷ್ಟ್ರಮಟ್ಟದಲ್ಲಿ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನ ಸುದ್ದಿ ಮಾಡಿತ್ತು. ಬಿಹಾರದಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿಗೆ ಪ್ರಿಯಾಂಕ್ ಖರ್ಗೆಯ ಆರ್ಎಸ್ಎಸ್ ವಿರೋಧಿ ಹೇಳಿಕೆಗಳು ಒಂದು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಕೋರ್ಟ್ನಲ್ಲಿ ಆರ್ಎಸ್ಎಸ್ ಪರೇಡ್ಗೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು, ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಸಕಲ ಸಿದ್ದತೆ ನಡೆದಿದೆ.
ಮಧ್ಯಾಹ್ನ 3.30ಕ್ಕೆ ಪಥಸಂಚಲನ ಶುರುವಾಗಲಿದ್ದು, 300 ಜನ ಗಣವೇಷಧಾರಿಗಳು ಹೆಜ್ಜೆ ಹಾಕಲಿದ್ದಾರೆ. ಈ ಹೈವೋಲ್ಟೇಜ್ ಪಥಸಂಚಲನದ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಚಿತ್ತಾಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಗಣವೇಶಧಾರಿಗಳು ಪರೇಡ್ನಲ್ಲಿ ಭಾಗಿಯಾಗಲಿದ್ದಾರೆ. ಒಂದೂವರೆ ಕಿಲೋಮೀಟರ್ ಪಥಸಂಚಲನ ನಡೆಯಲಿದೆ. ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ವೃತ್ತ, ಕೆನರಾ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಎಪಿಎಂಸಿವರೆಗೂ ಪಥಸಂಚಲನ ನಡೆಯಲಿದೆ.
800ಕ್ಕೂ ಹೆಚ್ಚು ಪೊಲೀಸರ ಭದ್ರತೆ
ಆರೆಸ್ಸೆಸ್ ಪರೇಡ್ಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಂಘ ಪರಿವಾರ ಕೋರ್ಟ್ ಮೆಟ್ಟಿಲೆರಿತ್ತು. ಆರ್ಎಸ್ಎಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಭೀಮ್ ಆರ್ಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘಟನೆಗಳು ತಾವೂ ಕೂಡ ಪಥಸಂಚಲನ ಮಾಡ್ತೇವೆ. ನಮಗೂ ಅವಕಾಶ ನೀಡಿ ಅಂತ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಇದರಿಂದ ದೊಡ್ಡ ಮಟ್ಟದ ಜಿದ್ದಾಜಿದ್ದಿಯೇ ನಡೆದಿತ್ತು. ಆರ್ಎಸ್ಎಸ್ ಲಾಠಿ ಬಿಟ್ಟು ಪಥಸಂಚಲನ ಮಾಡಲಿ ಅಂತ ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದರಿಂದ ಈ ಪಥಸಂಚಲನ ಫೈಟ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಕಲಬುರಗಿ ಹೈಕೋರ್ಟ್ ಪೀಠದಲ್ಲಿ ತೀರ್ಪಿನ ಜಿಲ್ಲಾಡಳಿತ ಇಂದು ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಎಸ್ಪಿ ನೈತೃತ್ವದಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರು ರೂಟ್ಮಾರ್ಚ್ ಮಾಡಿದ್ದಾರೆ. ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಬಜಾಜ್ ಕಲ್ಯಾಣ ಮಂಟಪದ ಬಳಿ ತಲಾ ಒಂದು ಕೆಎಸ್ಆರ್ಪಿ, ಡಿಎಆರ್ ತುಕಡಿ ಸೇರಿ 650 ಜನ ಪೊಲೀಸರು ಹಾಗೂ 250 ಜನ ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಲಬುರಗಿ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಡಿವೈಎಸ್ಪಿ ನೈತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಪಥಸಂಚಲನ ಹಿನ್ನೆಲೆ ಚಿತ್ತಾಪುರ ಪಟ್ಟಣದಾದ್ಯಂತ ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾ ಕೂಡ ಬಳಕೆ ಮಾಡಲಾಗುತ್ತಿದೆ.
























