ಆ್ಯಂಟಿ ರೇಬೀಸ್ ಲಸಿಕೆ, ರೇಬೀಸ್ ಇಮ್ಯುನೊಗ್ಲೋಬುಲಿನ್ಗಳ ಸಂಗ್ರಹ ಕಡ್ಡಾಯ
ಬೆಂಗಳೂರು : ಖಾಸಗಿ ಆಸ್ಪತ್ರೆಗಳು ಹಾವು ಕಡಿತ, ನಾಯಿ ಕಡಿತ ಸೇರಿ ಪ್ರಾಣಿ ಕಡಿತದ ತುರ್ತು ಸಂದರ್ಭಗಳಲ್ಲಿ ಮುಂಗಡ ಹಣ ಪಾವತಿಗೆ ಒತ್ತಾಯಿಸದೆ ಸಂತ್ರಸ್ತರಿಗೆ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್ಗಳ ಸಂಗ್ರಹ ಹೊಂದಿರಬೇಕು. ನಾಯಿ, ಹಾವು ಸೇರಿದಂತೆ ಇತರ ಪ್ರಾಣಿಗಳು ಕಚ್ಚಿದವರಿಗೆ ಉಚಿತ ಪ್ರಾಥಮಿಕ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯ ನೀಡಬೇಕು. ಯಾವುದೇ ಆಸ್ಪತ್ರೆ ಮುಂಗಡ ಹಣ ಕೇಳದೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೌಲಭ್ಯ ಇಲ್ಲದ ಆಸ್ಪತ್ರೆಗಳು ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸುರಕ್ಷಿತ ರವಾನೆವಾಗಿ ಮಾಡಬೇಕು. ಆಸ್ಪತ್ರೆಯ ವೆಚ್ಚವನ್ನು ಜಿಲ್ಲಾ ನೋಂದಣಿ ಮತ್ತು ಅಹವಾಲು ಪರಿಹಾರ ಪ್ರಾಧಿಕಾರ ಮರಳಿ ಪಾವತಿಸಲಿದೆ. ಚಿಕಿತ್ಸೆ ನೀಡದೆ ವೈದ್ಯಕೀಯ ನಿರ್ಲಕ್ಷ್ಯಕ್ಕೆ 2 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಗಂಭೀರ ನಿರ್ಲಕ್ಷ್ಯ ಕಂಡುಬಂದರೆ ಆಸ್ಪತ್ರೆಯ ಪರವಾನಗಿ ರದ್ದು ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
2030ರೊಳಗೆ ನಾಯಿ ಕಚ್ಚುವುದರಿಂದ ಹಾಗೂ ರೇಬೀಸ್ನಿಂದ ಶೂನ್ಯ ಸಾವು ಸಾಧಿಸುವ ಗುರಿ ಇದೆ. ಹಾವು ಕಚ್ಚಿದವರಿಗೂ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಕ್ಷಣದ ತುರ್ತು ಚಿಕಿತ್ಸೆ ಸಿಗಬೇಕು. ಜಿಲ್ಲಾ ನೋಂದಣಿ ಮತ್ತು ಅಹವಾಲು ಪ್ರಾಧಿಕಾರದ ಮೂಲಕ ಚಿಕಿತ್ಸಾ ವೆಚ್ಚ ನೀಡಲಾಗುವುದು. SAST ಯೋಜನೆಯ ಅಡಿಯಲ್ಲಿ ರೋಗಿಗಳಿಗೆ ದಾಖಲಾತಿ ಮಾಡಬೇಕು ಎಂದು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಜನವರಿಯಿಂದ ನವೆಂಬರ್ 2ರ ವರೆಗೆ 4,10,152 ಜನರ ಮೇಲೆ ನಾಯಿಗಳು ದಾಳಿ ಮಾಡಿದ್ದು, ರಾಜ್ಯದಲ್ಲಿ 34 ಜನರು ಬಲಿ ಆಗಿದ್ದಾರೆ. ಒಂದೇ ವಾರದಲ್ಲಿ 12,257 ಹೆಚ್ಚು ಜನರ ಮೇಲೆ ಬೀದಿನಾಯಿ ಅಟ್ಯಾಕ್ ಮಾಡಿವೆ. ಕಳೆದ ಒಂದು ವಾರದಲ್ಲಿ ನಾಯಿ ಕಡಿತದಿಂದ 3 ಜನರು ಸಾವನ್ನಪ್ಪಿದ್ದಾರೆ.
























