ಬೆಂಗಳೂರು: ಪ್ರಧಾನಿ ಮೋದಿ ಅವರ ಜನಪ್ರಿಯತೆ ಮುಂದುವರಿದಿದೆ ಎನ್ನುವುದನ್ನು ಬಿಹಾರದ ವಿಧಾನಸಭಾ ಚುನಾವಣೆ ಮತ್ತೆ ಸ್ಪಷ್ಟಪಡಿಸಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕವೂ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿಲ್ಲ. ಮಾತ್ರವಲ್ಲದೆ ಮಹಾರಾಷ್ಟ್ರ, ಹರಿಯಾಣ ಹಾಗೂ ಬಿಹಾರದಲ್ಲಿ ಜನರು ಮತ್ತೆ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿರುವುದು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ ಜಾತಿ ರಾಜಕಾರಣ ಮತ್ತು ಸಮೀಕರಣಗಳ ಬಗ್ಗೆ ನಡೆದಿದ್ದ ಚರ್ಚೆಗಳು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಕೂಲವಾಗುವುದಾಗಿ ಫಲಿತಾಂಶ ತೋರಿಸಿದೆ. ತಮ್ಮೊಂದಿಗೆ ಎಲ್ಲಾ ಸಮುದಾಯಗಳ ಬೆಂಬಲವಿದೆ ಎಂದು ಕಾಂಗ್ರೆಸ್ ನಾಯಕರಿಗೆ ಇದ್ದ ಭ್ರಮೆಯೂ ಸುಳ್ಳಾಗಿದೆ ಎಂದು ಟೀಕಿಸಿದರು. ಎಸ್‌ಸಿ-ಎಸ್‌ಟಿ ಸಮುದಾಯದ ಶೇ.80ರಷ್ಟು ಜನರು ಬಿಜೆಪಿ ಪರ ಮತ ಹಾಕಿರುವುದರಿಂದ ಹಿಂದುಳಿದ ವರ್ಗಗಳ ಬೆಂಬಲವೂ ಬಿಜೆಪಿ ಕಡೆಗೆ ಒಲಿದಿದೆ ಎಂದು ಸಮರ್ಥನೆ ಮಾಡಿದ್ದಾರೆ.
























