ಸುಳ್ಯ ತಾಲೂಕಿನ, ಒಂದೊಮ್ಮೆ ಕುಗ್ರಾಮವಾಗಿದ್ದ, ಮಾಡಪ್ಪಾಡಿಯ ಪಾಲ್ತಾಡು ಮನೆಯ ಹಿರಿಯ ಸಹಕಾರಿ ಪಿ.ಸಿ. ಜಯರಾಮರಿಗೆ ಕರ್ನಾಟಕ ಸರಕಾರವು ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಘೋಷಿಸಿದೆ.
ನಾಳೆ ಪ್ರಶಸ್ತಿ ಪ್ರದಾನ
ನಾಳೆ, ನ. 14 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್’ನಲ್ಲಿ ಏರ್ಪಡಿಸಲಾಗುವ ಸಹಕಾರ ಸಪ್ತಾಹ ಸಮಾರಂಭದ ಉದ್ಘಾಟನಾ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
ಮಡಪ್ಪಾಡಿಯ ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ಕಾಯಕಲ್ಪ
ಮಡಪ್ಪಾಡಿಯ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಸುದೀರ್ಘ 37 ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದ ಹಿರಿಮೆ ಇವರದು. ಅಧಿಕಾರ ವಹಿಸಿಕೊಂಡ ಆರಂಭದ, 1980ರ ದಶಕದಲ್ಲಿ ಯಾರದೋ ದುರ್ಬಳಕೆಯಿಂದಾಗಿ ನಷ್ಟದಲ್ಲಿದ್ದ ಸಂಘವನ್ನು ಲಾಭದ ಸ್ಥಿತಿಗೆ ತಂದು ಬೀಗಿದವರು ಇವರು. ಇಂದಿಗೂ ಆ ಮಹಾಪ್ರಯತ್ನದ ಫಲವನ್ನು ಸಂಘವು ಅನುಭವಿಸುತ್ತಿದೆ.
ಸ್ಥಾಪಕಾಧ್ಯಕ್ಷ
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾಗಿ 1997ರಿಂದ 2007ರವರೆಗೆ ಹಾಗೂ 2020ರಿಂದ 2025ರವರೆಗೆ, ಒಟ್ಟು 15 ವರ್ಷಗಳ ಕಾಲ ಅಧ್ಯಕ್ಷರಾಗಿ ಸೊಸೈಟಿಯನ್ನು ಉತ್ತಮ ಸ್ಥಿತಿಗೆ ತಂದ ಸಾಧಕ ಇವರು.
ಉಳಿದಂತೆ ಟಿ.ಎ.ಪಿ.ಸಿ.ಎಂ.ಎಸ್.ನ ನಿರ್ದೇಶಕರಾಗಿ, ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ, ಮಂಗಳೂರು ಇದರ ನಿರ್ದೇಶಕರಾಗಿ, ಸುದ್ದಿ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಘ, ಪುತ್ತೂರು ಇದರ ಮುಖ್ಯ ಪ್ರವರ್ತಕರಾಗಿ, ಪಯಸ್ವಿನಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ಸುಳ್ಯ ಇದರ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಮಡಪ್ಪಾಡಿ ಗ್ರಾ.ಪಂ. ಸದಸ್ಯರಾಗಿ, ಸುಳ್ಯ ತಾ.ಪಂ.ಸದಸ್ಯ ಹಾಗೂ ಉಪಾಧ್ಯಕ್ಷರಾಗಿ, ತಾ.ಪಂ.ನ ವಿಪಕ್ಷ ನಾಯಕರಾಗಿ, ಸಾಮಾಜಿಕ ಕ್ಷೇತ್ರಗಳಾದ ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್‌ನ ನಿರ್ದೇಶಕರಾಗಿ, ಗೌಡ ಯುವ ಸಮುದಾಯ ಭವನ ನಿರ್ಮಾಣ ಸಮಿತಿಯ ಕೋಶಾಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಗೆ ಒಳಪಟ್ಟ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಸುಳ್ಯ ಇದರ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಕೆವಿಜಿ ಸಮಾಜ ಸೇವಾ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಅಧ್ಯಕ್ಷರಾಗಿ, ಗುತ್ತಿಗಾರು ಜೇಸಿಸ್‌ನ ಅಧ್ಯಕ್ಷರಾಗಿ, ಗುತ್ತಿಗಾರು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ಮಡಪ್ಪಾಡಿ ಶಾಲಾ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ.
























