ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ಹಿಂದಿನ ಮಾಸ್ಟರ್ ಮೈಂಡ್
ನವದೆಹಲಿ : ಕೆಂಪುಕೋಟೆ ಸಮೀಪ ಸೋಮವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಬಂಧಿಸಲಾಗಿದೆ. ಜಂಟಿ ಭದ್ರತಾ ಪಡೆಗಳು ಮೌಲ್ವಿ ಇಮಾಮ್ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಿವೆ. ಶ್ರೀನಗರ ಪೊಲೀಸ್ & ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ ಜಂಟಿ ಕಾರ್ಯಾಚರಣೆ ನಡೆಸಿದ್ದವು.

ಆರೋಪಿ ಮನೆಯಿಂದ ಐದು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಪತ್ನಿಯನ್ನು ಶಂಕಿತ ಮೂಲಭೂತವಾದ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಮೌಲ್ವಿಯ ವಿಚಾರಣೆ ನಡೆಸಿದಾಗ ಮುಜಮ್ಮಿಲ್ ನಂಟು ಪತ್ತೆಯಾಗಿದೆ. ಇರ್ಫಾನ್ ಅಹ್ಮದ್ ವಾಗೆ, ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಈತ ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಿದ್ದಾನೆ ಎಂದು ಎನ್ನಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಜೊತೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ.
ಈ ನಡುವೆ ಕಾರಿನಲ್ಲಿದ್ದ ಬಾಂಬ್‌ಗೆ ಜೋಡಿಸಿದ್ದ ಐಇಡಿ ಅಪೂರ್ಣವಾಗಿತ್ತು. ಅದನ್ನು ಸರಿಯಾಗಿ ಜೋಡಿಸಲಾಗಿರಲಿಲ್ಲ. ಇದು ಬಾಂಬ್ ಸ್ಫೋಟದ ಪರಿಣಾಮವನ್ನು ಸೀಮಿತಗೊಳಿಸಿತು. ಒಂದುವೇಳೆ ಅದು ಉದ್ದೇಶಪೂರ್ವಕ ದಾಳಿಯಾಗಿದ್ದರೆ ಅದರ ಪರಿಣಾಮ ಇನ್ನೂ ಹೆಚ್ಚಾಗಿರುತ್ತಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಉಗ್ರರ ಉದ್ದೇಶ ಬೇರೆಡೆ ಬಾಂಬ್ ಇಡುವುದಾಗಿತ್ತು. ಆದರೆ ಬಾಂಬ್ ಸರಿಯಾಗಿ ಜೋಡಣೆಯಾಗಿರದ ಕಾರಣ ಗುರಿ ತಲುಪುವ ಮೊದಲೇ ರಸ್ತೆಯಲ್ಲೇ ಸ್ಫೋಟಿಸಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ತರ್ಕಿಸಿದ್ದಾರೆ.
ದೆಹಲಿ-ಎನ್‌ಸಿಆರ್ ಮತ್ತು ಫರಿದಾಬಾದ್‌ನಲ್ಲಿ ರಾಷ್ಟ್ರವ್ಯಾಪಿ ಹೆಚ್ಚಿದ ಭದ್ರತಾ ಕ್ರಮಗಳು ಹಾಗೂ ಫರೀದಾಬಾದ್ನಲ್ಲಿ ತನ್ನ ಸಹಚರರ ಬಂಧನ ಶಂಕಿತ ಆತ್ಮಾಹುತಿ ಬಾಂಬರ್ ಡಾ.ಮೊಹಮ್ಮದ್ ಉಮರ್‌ನಿಗೆ ಭಯವನ್ನುಂಟುಮಾಡಿತ್ತು. ಈ ವೇಳೆ ಸ್ಫೋಟಕವನ್ನು ಸ್ಥಳಾಂತರಿಸಲು ಆತ ಪ್ರಯತ್ನಿಸುವಾಗ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.
ತನಿಖಾಧಿಕಾರಿಗಳು ಇದು ಆತ್ಮಹತ್ಯಾ ಕಾರ್ಯಾಚರಣೆಯಲ್ಲ, ಆಕಸ್ಮಿಕ ಸ್ಫೋಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿದ್ದುದರಿಂದ ಇದು ಆಕಸ್ಮಿಕ ಸ್ಫೋಟ ಎಂಬ ಸಿದ್ಧಾಂತಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಇಂಟೆಲ್ ಅಧಿಕಾರಿಗಳು ಆರೋಪಿಗೆ ಐಇಡಿಯನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಇನ್ನೂ ಹೆಚ್ಚಿನ ವಿನಾಶದ ನಿಯಂತ್ರಣಕ್ಕೆ ಬಂದಿತು ಎಂದು ಹೇಳಿದ್ದಾರೆ.
ಶಂಕಿತನು ಆತ್ಮಹತ್ಯಾ ಕಾರ್ ಬಾಂಬ್ ದಾಳಿಯ ಸಾಮಾನ್ಯ ಮಾದರಿಯನ್ನು ಅನುಸರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವನು ಕಾರನ್ನು ಗುರಿಗೆ ಡಿಕ್ಕಿ ಹೊಡೆಸಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಕೆಂಪುಕೋಟೆಯ ಬಳಿ ನಡೆದ ಸ್ಫೋಟವು ಗರಿಷ್ಠ ಹಾನಿಯನ್ನುಂಟುಮಾಡುವ ಗುರಿಯನ್ನು ಹೊಂದಿರುವ ಆತ್ಮಹತ್ಯಾ ಬಾಂಬರ್‌ಗಳ ವಿಶಿಷ್ಟ ಕಾರ್ಯಾಚರಣೆಯ ವಿಧಾನವನ್ನು ಅನುಸರಿಸಲಿಲ್ಲ. ಹೀಗಾಗಿ, ಇದೊಂದು ಆಕಸ್ಮಿಕ ಸ್ಫೋಟ ಎಂದು ಪರಿಗಣಿಸಬಹುದು ಎನ್ನಲಾಗಿದೆ.
























