ನವದೆಹಲಿ: ಕೆಂಪು ಕೋಟೆಯ ಸಮೀಪ ನಡೆದ ಕಾರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಗ್ರ ಉಮರ್‌ನ ತಾಯಿ, ಸಹೋದರರು ಸೇರಿದಂತೆ ಒಟ್ಟು ಹದಿಮೂರು ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪುಲ್ವಾಮಾದಿಂದ ಉಮರ್‌ನ ಇಬ್ಬರು ಸಹೋದರರು ಮತ್ತು ದೆಹಲಿಯ ವಿವಿಧ ಲಾಡ್ಜ್‌ಗಳಿಂದ ಕೆಲವು ಸಂಶಯಾಸ್ಪದ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಲವಾರು ಸಿಸಿಟಿವಿಗಳ ಪರಿಶೀಲನೆಯನ್ನು ಸಹ ಪೊಲೀಸರು ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಅನಂತನಾಗ್ ಜಿಎಂಸಿಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡಿದ್ದ ಉಮರ್, ಬಳಿಕ ದೆಹಲಿಗೆ ಹೋಗಿದ್ದ. ಸದ್ಯ ಫರೀದಾಬಾದ್‌ನ ಅಲ್ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಪೊಲೀಸರು ಅಲ್ ಫಲಾಹ್ ಕಾಲೇಜಿನ ಮೇಲೆ ಸಹ ದಾಳಿ ನಡೆಸಿದ್ದಾರೆ. ಅಲ್ಲದೇ ದೌಜ್, ಫತೇಪುರ್ ತಗಾ ಗ್ರಾಮದಲ್ಲಿಯೂ ತನಿಖಾ ತಂಡಗಳ ಕಾರ್ಯಾಚರಣೆ ನಡೆಯುತ್ತಿದೆ.
























