ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

300ಕ್ಕೂ ಆಧಿಕ ಚಿತ್ರಗಳಲ್ಲಿ ನಟಿಸಿದ್ದ ನಟ, ರಾಜಕಾರಣಿ

ಮುಂಬೈ: ಬಾಲಿವುಡ್‌ನ ದಂತಕಥೆ ಹೀ-ಮ್ಯಾನ್’ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಧರ್ಮೇಂದ್ರ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಇವರಿಗೆ 89 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಶಕಗಳಿಗೂ ಹೆಚ್ಚು ಕಾಲದ ಸಿನಿಪಯಣದಲ್ಲಿ ಧರ್ಮೇಂದ್ರ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ‘ಇಕ್ಕೀಸ್’ ಅವರ ಕೊನೆಯ ಚಿತ್ರವಾಗಲಿದೆ.

ಅವರು ಪತ್ನಿ ಹೇಮಾಮಾಲಿನಿ ಮತ್ತು ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್, ಅಹಾನಾ ಡಿಯೋಲ್ ಹಾಗೂ ಅಜೀತಾ ಮತ್ತು ವಿಜೇತಾ ಸೇರಿದಂತೆ ಆರು ಜನ ಮಕ್ಕಳನ್ನು ಅಗಲಿದ್ದಾರೆ.





















































 
 

ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಧರ್ಮೇಂದ್ರ, 1960 ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ವೃತ್ತಿಜೀವನವನ್ನು ಆರಂಭಿಸಿದರು. 2012ರಲ್ಲಿ ಅವರಿಗೆ ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ ನೀಡಿ ಗೌರವಿಸಲಾಗಿತ್ತು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ‘ಯಾದೋಂ ಕೀ ಬಾರಾತ್’, ‘ಮೇರಾ ಗಾಂವ್ ಮೇರಾ ದೇಶ್’, ‘ನೌಕರ್ ಬೀವಿ ಕಾ’, ‘ಫೂಲ್ ಔರ್ ಪತ್ಥರ್’, ‘ಬೇತಾಬ್’ ಮತ್ತು ‘ಘಾಯಲ್’ನಂತಹ ಹಲವಾರು ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪಂಜಾಬ್‌ನ ಲುಧಿಯಾನ ಜಿಲ್ಲೆಯ ಹಳ್ಳಿಯೊಂದರಲ್ಲಿ ಧರ್ಮೇಂದ್ರ ಕೇವಲ್ ಕೃಷ್ಣ ಡಿಯೋಲ್ ಆಗಿ ಜನಿಸಿದ ಅವರು, ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು 1954ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ನಂತರ, ನಟಿ ಹೇಮಾಮಾಲಿನಿ ಅವರನ್ನು ಪ್ರೀತಿಸಿ ಮದುವೆಯಾದರು.

ತಮ್ಮ 89ನೇ ವಯಸ್ಸಿನಲ್ಲೂ ಧರ್ಮೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಆರೋಗ್ಯಕರ ಜೀವನ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ವೀಡಿಯೊಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿದ್ದರು. ಟ್ರ್ಯಾಕ್ಟರ್ ಓಡಿಸುವುದು, ತಮ್ಮ ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಅಭಿಮಾನಿಗಳಿಗೆ ಸರಳ ಜೀವನ ಪಾಠಗಳು ಮತ್ತು ಕೃಷಿ ಸಲಹೆಗಳನ್ನು ನೀಡುವುದು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಸಾಮಾನ್ಯವಾಗಿತ್ತು.

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ ಭಾರತೀಯ ಚಿತ್ರರಂಗಕ್ಕೆನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಅವರು 6 ದಶಕಗಳ ಕಾಲ ಸಕ್ರಿಯರಾಗಿದ್ದರು. ಇಳಿ ವಯಸ್ಸಿನಲ್ಲಿ ಕೂಡ ಅವರು ನಟಿಸುವುದು ನಿಲ್ಲಿಸಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅವರ ನಿಧನದಿಂದ ಕೋಟ್ಯಂತರ ಅಭಿಮಾನಿಗಳಿಗೆ ನೋವಾಗಿದೆ.

ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಧರ್ಮೇಂದ್ರ ಅವರು ಯಶಸ್ಸು ಕಂಡಿದ್ದರು. 2004ರಿಂದ 2009ರ ತನಕ ಭಾರತೀಯ ಜನತಾ ಪಕ್ಷದಿಂದ ಅವರ ಸಂಸದನಾಗಿ ಕೆಲಸ ಮಾಡಿದ್ದರು. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿ ಕೂಡ ಅವರು ಕಾಣಿಸಿಕೊಂಡಿದ್ದರು. ಧರ್ಮೇಂದ್ರ ಅವರ ಅಗಲಿಕೆಗೆ ಸಿನಿಮಾ, ರಾಜಕೀಯ, ಕ್ರೀಡೆ ಮುಂತಾದ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

error: Content is protected !!
Scroll to Top