ಮಸೀದಿ ಬಳಿ 3 ತಾಸು ನಿಂತಿದ್ದ ಕಾರು, ಚಾಲಕನ ಮುಖ ಗೋಚರ
ನವದೆಹಲಿ: ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟದಲ್ಲಿ ಬಳಸಿರುವ ಹುಂಡೈ ಐ20 ಕಾರನ್ನು ಸ್ಫೋಟಕ್ಕೂ ಮೊದಲು ಸುಮಾರು ಮೂರು ಗಂಟೆ ಮಸೀದಿ ಬಳಿ ಪಾರ್ಕಿಂಗ್ ಆಗಿದ್ದ ವಿಚಾರ ಈಗ ಸಿಸಿಟಿವಿ ದೃಶ್ಯಗಳಿಂದ ಪತ್ತೆಯಾಗಿದೆ.
ಕಾರು ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಮಧ್ಯಾಹ್ನ 3.19ಕ್ಕೆ ಪ್ರವೇಶಿಸಿ ಸಂಜೆ 6.48ಕ್ಕೆ ನಿರ್ಗಮಿಸಿದೆ. ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಕೆಂಪು ಕೋಟೆಯ ಬಳಿ ಸಂಜೆ 6.52ಕ್ಕೆ ಸ್ಫೋಟಗೊಂಡಿದೆ. ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ವೇಳೆ ಕಾರಿನಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್, ಮುಖಕ್ಕೆ ಮಾಸ್ಕ್ ಧರಿಸಿದ್ದ ಚಾಲಕ ಒಬ್ಬನೇ ಕುಳಿತಿದ್ದ. ತನಿಖಾಧಿಕಾರಿಗಳು ಈಗ ಕಾರು ಎಲ್ಲಿಂದ ಆಗಮಿಸಿದೆ ಎನ್ನುವುದರ ಜಾಡು ಹಿಡಿಯಲು 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರಂಭದಲ್ಲಿ ಕಾರಿನ ಚಾಲಕನ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಳಿಕ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿರುವುದು ಕಂಡುಬರುತ್ತಿದೆ.
ಫರಿದಾಬಾದ್ನ ಡಾ.ಮೊಹಮ್ಮದ್ ಉಮರ್ ಎಂಬಾತನನ್ನು ಈ ಸ್ಫೊಟದ ಪ್ರಮುಖ ಆರೋಪಿ ಎಂದು ಸಂಶಯಿಸಲಾಗಿದೆ. ಕಾರಿನಲ್ಲಿ ಡಾ.ಮೊಹಮ್ಮದ್ ಉಮರ್ ಇದ್ದ ಹಾಗೂ ತನ್ನ ಇಬ್ಬರು ಸಹಚರರ ಜೊತೆಗೆ ಸ್ಫೋಟದ ಸಂಚನ್ನು ಕಾರ್ಯಗತಗೊಳಿಸಿದ್ದಾನೆ ಎಂದು ಪೊಲೀಸರು ಸಂಶಯಿಸಿದ್ದಾರೆ. ಫರಿದಾಬಾದ್ನಲ್ಲಿ 2900 ಕೆಜಿ ಅಮೋನಿಯಂ ನೈಟ್ರೇಟ್ನೊಂದಿಗ ಇಬ್ಬರು ವೈದ್ಯರು ಸೆರೆಯಾದ ಬಳಿಕ ಗಾಬರಿಯಾದ ಡಾ. ಮೊಹಮ್ಮದ್ ಉಮರ್ ಅವಸರದಲ್ಲಿ ಈ ಸ್ಫೋಟ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತರ್ಕಿಸಿದ್ದಾರೆ.
ಮೊಹಮ್ಮದ್ ಸಲ್ಮಾನ್ ಎಂಬಾತ ಈ ಹುಂಡೈ ಕಾರಿನ ಮೂಲ ಮಾಲಕನಾಗಿದ್ದು ಅವನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಈ ಕಾರು ಹಲವರಕೈ ಬದಲಾಯಿಸಿದ್ದು, ಕೊನೆಯದಾಗಿ ಫರಿದಾಬಾದ್ನ ರಾಯಲ್ ಕಾರ್ ಝೋನ್ ಎಂಬಾತ ಬಳಸಿದ ಕಾರುಗಳನ್ನು ಮಾರುವ ಡೀಲರ್ಗೆ ಮಾರಾಟ ಮಾಡಲಾಗಿತ್ತು. ಇಲ್ಲಿಂದ ಪುಲ್ವಾಮದ ನಿವಾಸಿ ತಾರಿಕ್ ಎಂಬಾತ ಖರೀದಿಸಿದ್ದ. ಅವನಿಂದ ಡಾ.ಮೊಹಮ್ಮದ್ ಉಮರ್ ಖರೀದಿಸಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ದೆಹಲಿ ಪೊಲೀಸರು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಮುಂಬೈ, ಕೋಲ್ಕತ್ತಾ, ಬೆಂಗಳೂರು, ಜೈಪುರ, ಹರಿಯಾಣ, ಪಂಜಾಬ್, ಹೈದರಾಬಾದ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಇಂದು ಎರಡನೇ ಮತ್ತು ಅಂತಿಮ ಸುತ್ತಿನ ಮತದಾನ ನಡೆಯಲಿರುವ ಬಿಹಾರದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.
























