ಕರು ಮಾರಾಟ ಮಾಡಿದವರ ಮನೆ ಜಪ್ತಿ ಮಾಡಿದ್ದು ಕಾನೂನು ವ್ಯಾಪ್ತಿ ಮೀರಿದ ಕ್ರಮ ಎಂದ ಪುತ್ತೂರು ಎಸಿ
ಬೆಳ್ತಂಗಡಿ : ದನ ಮಾರಾಟ ಮಾಡಿದ ಕಾರಣಕ್ಕೆ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಮನೆ ಜಪ್ತಿ ಮಾಡಿದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಜೊಹರಾ ಸಾರಮ್ಮ ಅವರ ವಾಸದ ಮನೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ದನಗಳನ್ನು ವಧೆ ಮಾಡಲು ಉದ್ದೇಶಿಸಿದ್ದ ಆರೋಪಿಗಳ ಮನೆಯನ್ನು ಜಪ್ತಿ ಮಾಡಿದ್ದರು. ಇದಾದ ಬಳಿಕ ಇವರಿಗೆ ಕರುಗಳನ್ನು ಮಾರಾಟ ಮಾಡಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೊಹರಾ ಸಾರಮ್ಮ ಅವರ ಮನೆಯನ್ನು ಏಕಾಏಕಿ ಜಪ್ತಿ ಮಾಡಿ ಹೆಣ್ಣು ಮಕ್ಕಳು ಸೇರಿದಂತೆ ಏಳು ಮಂದಿಯ ಕುಟುಂಬವನ್ನು ಮನೆಯಿಂದ ಹೊರ ಹಾಕಿದ್ದರು. ಪೊಲೋಸರ ಈ ಕ್ರಮದ ವಿರುದ್ದ ಸಿಪಿಐಎಂ ಮುಖಂಡ ಬಿ.ಎಂ ಭಟ್ ಸಂತ್ರಸ್ತರ ಕುಟುಂಬದ ಪರವಾಗಿ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಈ ಮನವಿಯನ್ನು ಪುರಸ್ಕರಿಸಿದ ಸಹಾಯಕ ಆಯುಕ್ತರು ಪೊಲೋಸರು ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದ್ದು ಕೂಡಲೇ ಮನೆಯನ್ನು ಅವರಿಗೆ ಹಿಂತಿರುಗಿಸುವಂತೆ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಎಲ್ಲ ಅಂಶಗಳನ್ನು ಪರಿಶೀಲಿಸಲಾಗಿ, ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಾಗಲೇ ಪರವಾನಗಿಯಿಲ್ಲದೆ ಜಾನುವಾರು ಸಾಗಾಟ ಮಾಡಿದ ಕೃತ್ಯವನ್ನು ಎಸಗಿದ ವಾಹನ ಹಾಗೂ 3 ಕರುಗಳನ್ನು ಜಪ್ತಿ ಮಾಡಿ ಸೊತ್ತುಪಟ್ಟಿಯನ್ನು ಈ ಕಚೇರಿಗೆ ಸಲ್ಲಿಸಲಾಗಿದೆ. ಇದರ ಜೊತೆಗೆ ಕೃತ್ಯ ಎಸಗಿದ ಆರೋಪಿಗಳ 2 ಮನೆ ಹಾಗೂ ಸ್ವತ್ತುಗಳನ್ನು ಜಪ್ತಿ ಮಾಡಿ ಈ ಕಚೇರಿಗೆ ಸಲ್ಲಿಸಲಾಗಿದೆ. ಯಾರಿಂದ ಖರೀದಿ ಮಾಡಿದ್ದಾರೋ ಆ ವ್ಯಕ್ತಿಯ ವಾಸದ ಮನೆಯನ್ನು ಕೂಡ ಕೃತ್ಯ ನಡೆದ 4 ದಿನಗಳ ನಂತರ ಜೊಹರಾರವರು ಹಾಗೂ ಕುಟುಂಬದ 7 ಜನ ವಾಸಿಸುತ್ತಿರುವ ಮನೆಯನ್ನು ಏಕಾಏಕಿಯಾಗಿ ಜಪ್ತಿ ಮಾಡಿ ಪದ್ರಿ ವ್ಯಕ್ತಿಗಳಿಗೆ ವಾಸದ ಮನೆಯಿಂದ ಹೊರ ಹಾಕಿರುತ್ತೀರಿ. ಈ ಮನೆಯಲ್ಲಿ 7 ಜನ ವಾನ ಮಾಡುತ್ತಿದ್ದು ಇದರಲ್ಲಿ 16 ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು, ಹೈಸ್ಕೂಲಲ್ಲಿ ಓದುತ್ತಿರುವ ಒಬ್ಬ ಹುಡುಗ, ಮುದಿ ಪ್ರಾಯದ ಓರ್ವ ಮಹಿಳೆ ಹಾಗೂ ಉಳಿದ ಕುಟುಂಬದ ಸದಸ್ಯರುಗಳು ಇದ್ದಾರೆ. ಸಾಯಂಕಾಲ 6 ಗಂಟೆಯಿಂದ 7.45 ರವರೆಗೆ ಜಪ್ತಿ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿರುವುದು ತಮ್ಮ ಮಹಜರಿನಿಂದ ತಿಳಿದು ಬಂದಿರುತ್ತದೆ ಹಾಗೂ ತಾವು ಸಲ್ಲಿಸಿದ ವಿಡಿಯೋ ಚಿತ್ರಿಕರಣದ ತುಣುಕನ್ನು ಪರಿಶೀಲಿಸಿದಾಗ ಜೊಹರಾ ರವರ ಮನೆಯಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಕಂಡುಬಂದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
























