ಶ್ವಾನ ದಳದ ನೆರವಿನಿಂದ ರಕ್ಷಣೆ ಮಾಡಿದ ಪೊಲೀಸರು
ಚಿಕ್ಕಮಗಳೂರು: ವಾಯು ವಿಹಾರಕ್ಕೆಂದು ಕಾಡಿನೊಳಗೆ ಹೋಗಿದ್ದ ಹಿರಿಯ ವೈದ್ಯರೊಬ್ಬರು ದಾರಿತಪ್ಪಿ ವಾಪಸು ಬರಲಾಗದೆ ನಾಲ್ಕು ದಿನ ಕಾಡಿನಲ್ಲೇ ಅಲೆದಾಡಿದ ಘಟನೆಯೊಂದು ಕೊಪ್ಪ ತಾಲೂಕಿನ ಕಾಡಂಚಿನ ಗುಣವಂತೆ ಗ್ರಾಮದ ಬಳಿ ನಡೆದಿದೆ. ಅವರನ್ನು ಕೊನೆಗೆ ಪೊಲೀಸ್ ಇಲಾಖೆಯ ಶ್ವಾನ ದಳ ಪತ್ತೆ ಮಾಡಿದೆ.
ನವೆಂಬರ್ 2ರಂದು ವಾಯು ವಿಹಾರಕ್ಕೆ ಹೋಗಿದ್ದ ವೈದ್ಯ ವೆಂಕಟೇಗೌಡ (75) ದಾರಿ ತಪ್ಪಿ ಕಾಡು ಸೇರಿದ್ದರು. ಮರೆವಿನ ಕಾಯಿಲೆ ಇದ್ದ ಅವರು ವಾಪಸ್ ಬರಲು ದಾರಿ ಗೊತ್ತಾಗದೆ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ್ದರು. ಹೀಗೆ ಸುಮಾರು 4 ದಿನ ಸುತ್ತಾಡಿ ಕೊನೆಗೆ ಕಾಡಿನಲ್ಲೇ ಉಳಿದಿದ್ದರು.
ಕುಟುಂಬಸ್ಥರು ಎಷ್ಟು ಹುಡುಕಿದರೂ ಅವರು ಸುಳಿವು ಸಿಕ್ಕಿರಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಹುಡುಕಾಟ ಆರಂಭಿಸಿದಾಗ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು ಹೋಗಿದ್ದರು ಎಂದು ತಿಳಿದು ಬಂದಿತ್ತು. ಎಸ್ಪಿ ವಿಕ್ರಂ ಸೂಚನೆ ಮೇರೆಗೆ ಶ್ವಾನವನ್ನು ತಂದು ಹುಡುಕಾಟ ನಡೆಸಿದಾಗ ಕಾಡಂಚಲ್ಲಿ ಅವರ ಪಂಚೆ ಪತ್ತೆಯಾಗಿತ್ತು.
ಪಂಚೆಯ ವಾಸನೆ ಜಾಡು ಹಿಡಿದು ಕಾಡಿನ 5 ಕಿ.ಮೀ.ನಷ್ಟು ಒಳಗಿದ್ದ ಅವರನ್ನು ಪೊಲೀಸ್ ಶ್ವಾನ ಪತ್ತೆ ಮಾಡಿದೆ. ಬಳಿಕ ಪೊಲೀಸರು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತಂದಿದ್ದಾರೆ.
























