74 ನಾಪತ್ತೆ ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸಿ ತನಖೆ ನಡೆಸಲು ಆಗ್ರಹ
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ಸಂಭವಿಸಿದ್ದು, ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ಅನಾಥ ಶವ ಮತ್ತು ನಾಪತ್ತೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದ್ದಾರೆ.
ಮಾಹಿತಿಗಳ ಪ್ರಕಾರ 74 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ನಾಪತ್ತೆ ಪ್ರಕರಣಗಳನ್ನು ಎಫ್‌ಐಆರ್ ಆಗಿ ಪರಿವರ್ತಿಸಬೇಕು ಎಂದು ಕುಸುಮಾವತಿ ಪಿಐಎಲ್‌ನಲ್ಲಿ ಮನವಿ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಮೃತ ದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಈ ಮಧ್ಯೆ ಕುಸುಮಾವತಿ ಹೊಸ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣ ಮತ್ತೊಂದಿಷ್ಟು ಕುತೂಹಲ ಮೂಡಿಸಿದೆ.
ಪ್ರಕರಣ ಸಂಬಂಧ ಪ್ರಕರಣದಲ್ಲಿ ದೂರು ದಾರರಾಗಿರುವ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ.ಜಯಂತ್ ಅವರುಗಳಿಗೆ ಕಿರುಕುಳ ನೀಡಬಾರದು ಎಂದು ನ್ಯಾಯಪೀಠ ಈ ಹಿಂದೆ ಪೊಲೀಸರಿಗೆ ಸೂಚನೆ ನೀಡಿತ್ತು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ್‌ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ಜಾರಿ ಮಾಡಿತ್ತು.
ವಿಚಾರಣೆಗೆ ಹಾಜರಾದ ತಿಮರೋಡಿ
ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ಸಂಬಂಧಿ ಜಯಪ್ರಕಾಶ್ ಶೆಟ್ಟಿ ಬೆಂಗಳೂರು ಹೈಕೋರ್ಟ್‌ನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಾಖಲಿಸಿದ್ದ CCC 304/2020 ಪ್ರಕರಣ ಮತ್ತು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆಗಾಗಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ನ.6 ರಂದು ಹೈಕೋರ್ಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಮಾಧ್ಯಮದವರನ್ನು ಕಂಡು ತಿಮರೋಡಿ ಮತ್ತು ಸಂಗಡಿಗರು ಓಡಿ ಹೋಗುತ್ತಿರುವ ವಿಡಿಯೋ ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಅನೇಕ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
























