121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನಕ್ಕೆ ಉತ್ಸಾಹದಿಂದ ಧಾವಿಸಿದ ಮತದಾರರು
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. ಇಂದು ಮೊದಲ ಹಂತದ ಮತದಾನದಲ್ಲಿ, 18 ಜಿಲ್ಲೆಗಳಾದ್ಯಂತ 121 ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ಹಂತವು ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಎನ್ಡಿಎ ಮತ್ತು ಮಹಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆ ಇದಾಗಿರಲಿದೆ. ಆಡಳಿತವು ಪ್ರತಿ ಮತಗಟ್ಟೆಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.
ಮೊದಲ ಹಂತದಲ್ಲಿ ಪ್ರತಿ ಕ್ಷೇತ್ರದಲ್ಲಿ ಸರಾಸರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಜಫರ್‌ಪುರ ಮತ್ತು ಕುದ್ನಿಯಲ್ಲಿ ಗರಿಷ್ಠ 20 ಅಭ್ಯರ್ಥಿಗಳು ಮತ್ತು ಭೋರೆ, ಪರ್ಬಟ್ಟಾ, ಅಲೌಲಿಯಲ್ಲಿ ಕನಿಷ್ಠ 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ಮೊದಲ ಹಂತದಲ್ಲಿ ಒಟ್ಟು 45,341 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಬೂತ್‌ನಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಧಾನ ಕಚೇರಿಯಿಂದ ನೇರ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ಎಲ್ಲಾ ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಮೊದಲ ಹಂತದಲ್ಲಿ ಹಲವಾರು ಪ್ರಮುಖರ ಸ್ಪರ್ಧೆಗಳು ನಡೆಯಲಿವೆ. 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನೇರ ಸ್ಪರ್ಧೆ ಇದೆ. 12 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದರೆ, 34 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ. 11 ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುತ್ತಿದೆ, ಮತ್ತು 14 ಸ್ಥಾನಗಳಲ್ಲಿ ಎಲ್‌ಜೆಪಿ (ಆರ್) ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ, ಈ ಪೈಕಿ 12 ಸ್ಥಾನಗಳಲ್ಲಿ ನೇರ ಸ್ಪರ್ಧೆಗಳಿವೆ.
ಸಿಪಿಐ-ಎಂಎಲ್ ಏಳು ಸ್ಥಾನಗಳಲ್ಲಿ ಜೆಡಿಯು, ಐದು ಸ್ಥಾನಗಳಲ್ಲಿ ಬಿಜೆಪಿ ಮತ್ತು ಎರಡು ಸ್ಥಾನಗಳಲ್ಲಿ ಎಲ್‌ಜೆಪಿ (ಆರ್) ವಿರುದ್ಧ ಸ್ಪರ್ಧಿಸಲಿದೆ. ವಿಐಪಿ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಮತ್ತು ಒಂದು ಸ್ಥಾನ ಜೆಡಿಯು ವಿರುದ್ಧ ಸ್ಪರ್ಧಿಸುತ್ತಿದೆ. ಸಿಪಿಐ(ಎಂ) ಮತ್ತು ಸಿಪಿಐ ಕೂಡ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ.
ಇಂದು ಬಿಹಾರದಲ್ಲಿ ಪ್ರಜಾಪ್ರಭುತ್ವದ ಆಚರಣೆಯ ಮೊದಲ ಹಂತವಾಗಿದೆ. ವಿಧಾನಸಭಾ ಚುನಾವಣೆಯ ಈ ಹಂತದಲ್ಲಿ ಎಲ್ಲಾ ಮತದಾರರು ಪೂರ್ಣ ಉತ್ಸಾಹದಿಂದ ಮತ ಚಲಾಯಿಸಬೇಕೆಂದು ನಾನು ಕೋರುತ್ತೇನೆ. ಈ ಸಂದರ್ಭದಲ್ಲಿ, ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ರಾಜ್ಯದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ಬೂತ್‌ಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕೆಲಸಕ್ಕಾಗಿ ಸುಮಾರು ನಾಲ್ಕೂವರೆ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಇದರಲ್ಲಿ ಕೇಂದ್ರ ಪಡೆಗಳ 1500 ಕಂಪನಿಗಳು ಸೇರಿವೆ. ಇದಲ್ಲದೆ, 60 ಸಾವಿರಕ್ಕೂ ಹೆಚ್ಚು ಬಿಹಾರ ಪೊಲೀಸ್ ಸಿಬ್ಬಂದಿ-ಅಧಿಕಾರಿಗಳು, 30 ಸಾವಿರ ಬಿಹಾರ ವಿಶೇಷ ಸಶಸ್ತ್ರ ಪೊಲೀಸರು, 22 ಸಾವಿರ ಗೃಹರಕ್ಷಕರು, 20 ಸಾವಿರ ತರಬೇತಿ ಕಾನ್‌ಸ್ಟೆಬಲ್‌ಗಳು ಮತ್ತು ಸುಮಾರು 1.5 ಲಕ್ಷ ಕಾವಲುಗಾರರನ್ನು ಸಹ ಚುನಾವಣಾ ಕೆಲಸಕ್ಕಾಗಿ ನಿಯೋಜಿಸಲಾಗಿದೆ.
ಚುನಾವಣೆಯ ಸಮಯದಲ್ಲಾಗುವ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬಿಹಾರ ಪೊಲೀಸರು ಕ್ಯೂಆರ್ಟಿ ತಂಡವನ್ನು ಸಹ ರಚಿಸಿದ್ದಾರೆ. ಈ ತಂಡವು ಚುನಾವಣೆ ಸಮಯದಲ್ಲಿ ಬಂದೊದಗುವ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುತ್ತಾರೆ. ಈ ತಂಡದಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯಪಡೆಯ ಕಮಾಂಡೋಗಳು ಕೂಡ ಇರಲಿದ್ದಾರೆ.
ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಪಡೆದ ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಸೈನಿಕರನ್ನು ಒಳಗೊಂಡ ವಿಐಪಿ ಭದ್ರತಾ ಪೂಲ್ ಅನ್ನು ರಚಿಸಲಾಗಿದೆ. ಡಯಾರಾ ಪ್ರದೇಶದಲ್ಲಿ ಎಸ್‌ಟಿಎಫ್ ಜೊತೆಗೆ ಅಶ್ವಾರೋಹಿ ದಳವನ್ನು ನಿಯೋಜಿಸಲಾಗಿದೆ.
























