ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ವಿಡಿಯೋ ಕಳುಹಿಸಿ ವಿಕೃತಿ
ಬೆಂಗಳೂರು : ಖ್ಯಾತ ಸೀರಿಯಲ್ ನಟಿಯೊಬ್ಬರಿಗೆ ಕಾಮುಕನೊಬ್ಬ ಕೊಲೆಯಾದ ರೇಣುಕಾಸ್ವಾಮಿ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿ ಪ್ರಸಿದ್ಧರಾಗಿರುವ ನಟಿಗೆ ಫೇಸ್ಬುಕ್ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ ನೀಡಿದ್ದಾನೆ. ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆರೋಪಿ ಮೊದಲು ಫೇಸ್ಬುಕ್ನಲ್ಲಿ ʻNAVEENZʼ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ನಲ್ಲಿ ಮೆಸೇಜ್ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ನಟಿ ಮೆಸೇಜ್ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದರೂ ಕಿರುಕುಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಆತನ ಅಕೌಂಟ್ ಬ್ಲಾಕ್ ಮಾಡಿದ್ದರು. ಬಳಿಕ ಬೇರೆ ಐಡಿಯಿಂದ ಅಶ್ಲೀಲ ಮೆಸೇಜ್ ಕಳಿಸಿದ್ದ, ಗುಪ್ತಾಂಗದ ವಿಡಿಯೋ ಕಳಿಸಿ ವಿಕೃತಿ ಮೆರೆಯುತ್ತಿದ್ದ. ಆದರೂ ತಾಳ್ಮೆ ಕಳೆದುಕೊಳ್ಳದ ನಟಿ ಕಳೆದ ನವೆಂಬರ್ 1ರಂದು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನು ಭೇಟಿ ಮಾಡಿ ಬುದ್ಧಿಮಾತು ಹೇಳಿದ್ದರು. ಆದರೂ ಕೇಳದ ಆರೋಪಿ ಮತ್ತೆ ಅಶ್ಲೀಲ ಮೆಸೇಜ್ ಮಾಡೋದನ್ನ ಮುಂದುವರಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟಿ ದೂರು ನೀಡಿದ್ದರು. ನಟಿಯ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
























