ಕೆ-ಸೆಟ್‌ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ

ರಾಜ್ಯಾದ್ಯಂತ ಆಕ್ರೋಶ ವ್ಯಕ್ತ; ಧಾರ್ಮಿಕ ಭಾವನೆಗೆ ಘಾಸಿ ಮಾಡಿದ ಆರೋಪ

ಬೆಂಗಳೂರು: ನಿನ್ನೆ ರಾಜ್ಯಾದ್ಯಂತ ನಡೆದ ಕೆ-ಸೆಟ್ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಕಿವಿಯೋಲೆ, ಮೂಗುತಿಯನ್ನು ಬಿಚ್ಚಿಸಿರುವ ಕ್ರಮ ವಿವಾದದ ಸ್ವರೋಪ ಪಡೆದುಕೊಂಡಿದೆ. ಕೆಇಎ ಮಾಡಿಕೊಂಡ ಈ ಯಡವಟ್ಟಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನೂ ಅರೆಸ್ಟ್‌ ಮಾಡಲಾಗಿತ್ತು. ಈ ಘಟನೆ ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.





















































 
 

ನಿನ್ನೆ ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆನಡೆಸಲಾಗಿದೆ. ಒಟ್ಟು 33 ವಿಷಯಗಳಿಗೆ ನಡೆಯದಂತ ಕೆ-ಸೆಟ್ ಪರೀಕ್ಷೆಗೆ 1.36 ಲಕ್ಷ ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರದ 316 ಕೇಂದ್ರಗಳಲ್ಲಿ ನಿನ್ನೆ ಕೆ-ಸೆಟ್ ಪರೀಕ್ಷೆ ನಡೆಯಿತು. ಬಳ್ಳಾರಿಯಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ಕೆ-ಸೆಟ್ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರುವ ದೇವರ ದಾರವನ್ನು ಬಿಡದೆ ಬಿಚ್ಚಿಸಿರುವುದಾಗಿ ತಿಳಿದು ಬಂದಿದೆ.

ಕೆ-ಸೆಟ್ ಪರೀಕ್ಷೆಯ ವೇಳೆಯಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದರಿಂದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಬಳಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೂ ಪರೀಕ್ಷೆ ಬರೆದರು. ಪರೀಕ್ಷೆ ಬರೆದು ಹೊರ ಬಂದ ಮಹಿಳಾ ಅಭ್ಯರ್ಥಿಯೊಬ್ಬರು ಕಿವಿಯೋಲೆ, ಮೂಗುತಿ ಬಿಚ್ಚಿದ್ದು ನನ್ನ ಮನಸ್ಸಿಗೆ ನೋವಾಗಿದೆ. ಬೇಜಾರು ತಂದಿದೆ. ನಮಗೆ ಮಾಂಗಲ್ಯ, ಕಾಲುಂಗರ ಹೇಗೋ, ಹಾಗೆಯೇ ಮೂಗುತಿಯೂ ಬಹಳ ಮುಖ್ಯವಾದದ್ದು ಆಗಿದೆ. ನಿಯಮದ ಕಾರಣಕ್ಕೆ ಹೆಣ್ಣು ಮಕ್ಕಳ ಆಭರಣಗಳನ್ನು ಬಿಚ್ಚಿಸಿದ್ದು ಸರಿಯಲ್ಲ ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಸಿಇಟಿ ಪರೀಕ್ಷೆ ವೇಳೆಯೂ ಇಂತಹದ್ದೇ ಒಂದು ಪ್ರಕರಣ ವರದಿಯಾಗಿತ್ತು. ಬೀದರ್, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಜನಿವಾರವನ್ನು ಬಲವಂತದಿಂದ ತೆಗೆಸಲಾಗಿತ್ತು. ಇದನ್ನು ವಿರೋಧಿಸಿ ಬ್ರಾಹ್ಮಣ ಮಹಾಸಭಾ ಪ್ರತಿಭಟನೆ ನಡೆಸಿದ್ದಲ್ಲದೆ, ಕೋರ್ಟ್‌ಗೂ ಹೋಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿತ್ತು. ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.

error: Content is protected !!
Scroll to Top