ಪಕ್ಷ ತೊರೆಯುವ ಕುರಿತು ಪರೋಕ್ಷವಾಗಿ ಮಾತನಾಡಿದ ಮಾಜಿ ಪೊಲೀಸ್ ಅಧಿಕಾರಿ
ಚೆನ್ನೈ: ಬಿಜೆಪಿ ಜೊತೆಗಿನ ಅಣ್ಣಾಮಲೈ ನಂಟು ಹಳಸಿದೆಯೇ? ಹೀಗೊಂದು ವಿಚಾರ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವುದು ಈ ಚರ್ಚೆಗೆ ಕಾರಣ. ನಾನು ಪಕ್ಷದಲ್ಲಿ ಉಳಿಯಲು ಬಯಸಿದರೆ ಇರುತ್ತೇನೆ, ಇಲ್ಲದಿದ್ದರೆ ಕೃಷಿಗೆ ಮರಳುತ್ತೇನೆ. ಸಮಯ ಬಂದಾಗ ಮಾತನಾಡುತ್ತೇನೆ. ಹಣೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೊಯಮತ್ತೂರಿನಲ್ಲಿ ಅಣ್ಣಾಮಲೈ ಶನಿವಾರ ಹೇಳಿದ್ದಾರೆ. ಪಕ್ಷದ ನಾಯಕತ್ವದ ನಿರಂತರ ನಿರ್ಲಕ್ಷ್ಯ ಮತ್ತು ಎಐಎಡಿಎಂಕೆ ಜೊತೆಗಿನ ವಿವಾದಾತ್ಮಕ ಮೈತ್ರಿಯಿಂದಾಗಿ ರೋಸಿ ಹೋಗಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ರಾಜಕೀಯವು ಸ್ವಯಂಪ್ರೇರಿತ ಮಾರ್ಗವಾಗಿದೆ. ನಾವು ಅದರಲ್ಲಿ ನಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡುತ್ತೇವೆ ಎಂದು ಹೇಳಿದರು. ಅಣ್ಣಾಮಲೈ ಅವರ ಹೇಳಿಕೆಗಳು ಪಕ್ಷದ ಪ್ರಸ್ತುತ ಕಾರ್ಯತಂತ್ರ ಮತ್ತು ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅವರ ತೀವ್ರ ಅಸಮಾಧಾನವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ವಿಶೇಷವಾಗಿ ಅವರನ್ನು ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದು ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.
ಬಿಜೆಪಿಯ ಮಿತ್ರಪಕ್ಷ ಎಐಎಡಿಎಂಕೆ ಮೈತ್ರಿ ಮುಂದುವರಿಯಬೇಕಾದರೆ ಅಣ್ಣಾಮಲೈ ಅವರನ್ನು ತೆಗೆದುಹಾಕುವಂತೆ ಷರತ್ತು ಹಾಕಿತ್ತು. ಹೀಗಾಗಿ ಅಣ್ಣಾಮಲೈ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸಲಾಗಿದೆ. ಇದು ಅಣ್ಣಾಮಲೈ ಬೆಂಬಲಿಗರ ಅತೃಪ್ತಿಗೆ ಕಾರಣವಾಗಿದೆ. ಏತನ್ಮಧ್ಯೆ, ಹಿರಿಯ ಎಐಎಡಿಎಂಕೆ ನಾಯಕರ ಟೀಕೆಗಳು ಅವರ ನಿಲುವವನ್ನು ಮತ್ತಷ್ಟು ದುರ್ಬಲಗೊಳಿಸಿವೆ. ನಾನು ಪ್ರಸ್ತುತ ಪಕ್ಷವನ್ನು ಒಬ್ಬ ಕಾರ್ಯಕರ್ತನಾಗಿ ಗಮನಿಸುತ್ತಿದ್ದೇನೆ ಮತ್ತು ಕಾಯುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪರಿಶುದ್ಧ ರಾಜಕೀಯ ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಇಲ್ಲದಿದ್ದರೆ ನಾನು ನನ್ನ ಕೆಲಸವನ್ನು ತೊರೆದು ಪಕ್ಷಕ್ಕೆ ಸೇರುವ ಅಗತ್ಯವಿರಲಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ. ರಾಜಕೀಯ ವಿಶ್ಲೇಷಕರು ಅವರ ಹೇಳಿಕೆಯನ್ನು ಬಿಜೆಪಿ ನಾಯಕತ್ವಕ್ಕೆ ನೀಡಿದ ಎಚ್ಚರಿಕೆ ಎಂದು ವಿಶ್ಲೇಷಿಸಿದ್ದಾರೆ.
ಪಕ್ಷದ ದೀರ್ಘಕಾಲೀನ ಭವಿಷ್ಯಕ್ಕೆ ಅಣ್ಣಾಮಲೈ ಅಗತ್ಯವಿರುವ ವ್ಯಕ್ತಿ ಎಂದು ಬಿಜೆಪಿಯೊಳಗಿನ ಒಂದು ಬಣ ನಂಬುತ್ತದೆ. ವರ್ಚಸ್ವಿ, ಶುದ್ಧ ಮತ್ತು ನೆಲಮಟ್ಟದ ನಾಯಕ ಅವರು. ಆದರೆ ಸಮಯ ಮೀರುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಹೊರಹಾಕಲು ಬಿಜೆಪಿ ಬಯಸುತ್ತದೆ. ಇದನ್ನು ಸಾಧಿಸಲು ದೆಹಲಿ ನಾಯಕತ್ವವು ಯಾವುದೇ ಆಂತರಿಕ ಭಿನ್ನಾಭಿಪ್ರಾಯವನ್ನು ದೀರ್ಘಕಾಲ ಸಹಿಸುವುದಿಲ್ಲ. ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಅವರ ಕಠಿಣ ಹೇಳಿಕೆಗಳು ಅವರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತವೆ. ಈಗ ಪ್ರಶ್ನೆ ಬಿಜೆಪಿ ಅವರನ್ನು ಮನವೊಲಿಸುತ್ತದೆಯೇ ಅಥವಾ ಅವರೇ ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
























