ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಯದ್ವಾತದ್ವಾ ಇರಿದು ಪಲಾಯನ ಮಾಡಿದ ದುಷ್ಕರ್ಮಿಗಳು
ಬೆಂಗಳೂರು : ಕನ್ನಡ ರಾಜ್ಯೋತ್ಸವ ರೂಪಕಗಳ ಮೆರವಣಿಗೆ ವೇಳೆ ಬೆಳಗಾವಿ ನಗರದಲ್ಲಿ ಹಿಂಸಾಚಾರ ನಡೆದಿದೆ. ಮೆರವಣಿಗೆ ಗುಂಪಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐವರಿಗೆ ಚಾಕು ಇರಿದು ಪಲಾಯನ ಮಾಡಿದ್ದಾರೆ.
ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಘಟನೆ ನಡೆದಿದೆ. ಮೆರವಣಿಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಮನಸೋಇಚ್ಛೆ ಐವರಿಗೆ ಚಾಕು ಇರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗುರುನಾಥ ವಕ್ಕೂಂದ, ಸಚೀನ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್ ಚಾಕು ಇರಿತಕ್ಕೊಳಗಾದವರು. ಕೂಡಲೇ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಭೂಷಣ ಭೊರಸೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆ ವೇಳೆ ಘರ್ಷಣೆ ಆಗಿದೆ. ಐವರಿಗೆ ಚಾಕುವಿನಿಂದ ಇರಿದಿದ್ದಾರೆ, ಒಬ್ಬರ ತಲೆಗೆ ಗಾಯ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾರು ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಘಟನೆ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ. ಗಾಯಗೊಂಡ ಎಲ್ಲರೂ ಬೆಳಗಾವಿಯ ನೆಹರುನಗರದ ನಿವಾಸಿಗಳು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಈವರೆಗೆ 3-4 ಲಕ್ಷ ಜನರು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
























