ಪೊಲೀಸ್ ಮಹಾನಿರ್ದೇಶಕರಿಗೆ ಬಂದಿತ್ತು ಬಾಂಬ್ ಬೆದರಿಕೆಯ ಇ-ಮೇಲ್
ಚೆನ್ನೈ : ತಮಿಳಿನ ಖ್ಯಾತ ನಟರಾದ ರಜನಿಕಾಂತ್ ಹಾಗೂ ಧನುಷ್ ಅವರ ಮನೆಗೆ ಬಾಂಬ್ ಇಟ್ಟಿರುವ ಬಗ್ಗೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಇ-ಮೇಲ್ ಸಂದೇಶ ಬಂದ ಬಳಿಕ ಕೊಂಚ ಹೊತ್ತು ಆತಂಕದ ಪರಿಸ್ಥಿತಿ ಉಂಟಾಗಿತ್ತು. ಬಾಂಬ್ ಸ್ಕ್ವಾಡ್ ನಟರ ಮನೆಗೆ ತೆರಳಿ ತಪಾಸಣೆ ನಡೆಸಿದ್ದು, ಯಾವುದೇ ಬಾಂಬ್ ಸ್ಫೋಟಕ ಪತ್ತೆ ಆಗಿಲ್ಲ. ಇದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ.
ನಟ ರಜನಿಕಾಂತ್, ಧನುಷ್ ಹಾಗೂ ತಮಿಳು ನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಮನೆಗೆ ಬಾಂಬ್ ಇಟ್ಟಿದ್ದಾಗಿ ಹೇಳಿಕೊಂಡ ಇ-ಮೇಲ್ ಪೊಲೀಸ್ ಮಹಾನಿರ್ದೇಶಕರ ಕಚೇರಿಗೇ ಬಂದಿತ್ತು. ಕೂಡಲೇ ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ಅನುಮನಾಸ್ಪದ ವಸ್ತುಗಳು ಸಿಕ್ಕಿಲ್ಲ. ರಜನಿಕಾಂತ್ ಅವರ ಭದ್ರತಾ ಸಿಬ್ಬಂದಿಯ ವಿಚಾರಣೆಯನ್ನು ಮಾಡಲಾಗಿದೆ. ಅವರ ಪ್ರಕಾರ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಮನೆ ಒಳಗೆ ತೆರಳಿಲ್ಲ.
ಚೆನ್ನೈ ನಗರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಹಯೋಗದೊಂದಿಗೆ, ಇ-ಮೇಲ್‌ನಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳ ಮನೆಯನ್ನು ತಪಾಸಣೆ ಮಾಡಿದರು. ಶೋಧ ಕಾರ್ಯಾಚರಣೆಯ ನಂತರ, ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.
ಇತ್ತೀಚೆಗೆ ಹಲವಾರು ತಮಿಳು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಇದೇ ರೀತಿಯ ಬೆದರಿಕೆಗಳಿಗೆ ಗುರಿಯಾಗಿದ್ದಾರೆ. ಅಕ್ಟೋಬರ್ ಆರಂಭದಲ್ಲಿ, ತ್ರಿಶಾ ಕೃಷ್ಣನ್ ಮತ್ತು ಎಸ್. ಶೇಖರ್ ಸೇರಿದಂತೆ ಇತರ ಸೆಲೆಬ್ರಿಟಿಗಳಿಗೆ ಬೆದರಿಕೆಗಳನ್ನು ಕಳುಹಿಸಲಾಗಿತ್ತು. ಸಂಗೀತ ಸಂಯೋಜಕ ಇಳಯರಾಜ ಅವರ ಸ್ಟುಡಿಯೋವನ್ನು ಸಹ ಗುರಿ ಮಾಡಲಾಗಿತ್ತು. ಆದರೆ, ಎಲ್ಲವೂ ಫೇಕ್ ಎಂಬುದು ಗೊತ್ತಾಗಿದೆ.
























