ಬಲೂಚಿಸ್ತಾನ ಹೇಳಿಕೆಗೆ ಪ್ರತಿಯಾಗಿ ನಟನನ್ನು ಉಗ್ರರ ಪಟ್ಟಿಗೆ ಸೇರ್ಪಡೆ
ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಬಲೂಚಿಸ್ತಾನ ಬಗ್ಗೆ ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ ಸರ್ಕಾರ ಸಲ್ಮಾನ್ ಖಾನ್ಗೆ ಭಯೋತ್ಪಾದಕನ ಪಟ್ಟಕಟ್ಟಿದೆ.
ಸಲ್ಮಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಸಿನಿಮಾಗಳ ಬಗ್ಗೆ ಮಾತನಾಡುವಾಗ ಪಾಕಿಸ್ತಾನದ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಸೌದಿ ಅರೇಬಿಯಾದಲ್ಲಿ ಹಿಂದಿ ಸಿನಿಮಾ ಬಿಡುಗಡೆ ಮಾಡಿದರೆ ಸೂಪರ್ ಹಿಟ್ ಆಗುತ್ತದೆ. ತಮಿಳು, ತೆಲುಗು, ಮಲಯಾಳಂ ಸಿನಿಮಾ ಬಿಡುಗಡೆ ಮಾಡಿದರೆ ನೂರಾರು ಕೋಟಿ ಕಲೆಕ್ಷನ್ ಮಾಡುತ್ತದೆ. ಯಾಕೆಂದರೆ ಅನೇಕ ದೇಶಗಳ ಜನರು ಇಲ್ಲಿಗೆ ಬಂದಿದ್ದಾರೆ. ಬಲೂಚಿಸ್ತಾನ ಜನರು ಇಲ್ಲಿ ಇದ್ದಾರೆ. ಆಫ್ಘಾನಿಸ್ತಾನದ ಜನರು ಇಲ್ಲಿ ಇದ್ದಾರೆ. ಪಾಕಿಸ್ತಾನದ ಜನರು ಕೂಡ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಪಾಕಿಸ್ತಾನ ಮತ್ತು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರಗಳು ಎಂಬ ಅರ್ಥದಲ್ಲಿ ಸಲ್ಮಾನ್ ಖಾನ್ ಮಾತನಾಡಿದ್ದರಿಂದ ಪಾಕ್ ಸರ್ಕಾರ ಸಲ್ಮಾನ್ ಮೇಲೆ ಗರಂ ಆಗಿದೆ.
ಬಲೂಚಿಸ್ತಾನ ಕೂಡ ಪಾಕಿಸ್ತಾನದ ಭಾಗ. ಆದರೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಬಲೂಚಿಸ್ತಾನದ ಜನರು ಹೋರಾಡುತ್ತಿದ್ದಾರೆ. ಅಂಥವರಿಗೆ ಬೆಂಬಲ ನೀಡುವವರನ್ನು ಕೂಡ 4ನೇ ಹಂತದ ಭಯೋತ್ಪಾದಕರು ಎಂದು ಪಾಕ್ ಸರ್ಕಾರ ಪರಿಗಣಿಸುತ್ತಿದೆ. ಸಲ್ಮಾನ್ ಖಾನ್ ಅವರನ್ನು ಕೂಡ ಅಂಥವರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಪಾಕಿಸ್ತಾನದ ಸುದ್ದಿ ಸಂಸ್ಥೆಗಳು ಅಧಿಕೃತವಾಗಿ ಈ ಬಗ್ಗೆ ವರದಿ ಮಾಡಿಲ್ಲ.
ಸಲ್ಮಾನ್ ಖಾನ್ ಅವರ ಹೆಸರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾಕರ ಪಟ್ಟಿಗೆ ಸೇರಿಸಿದ್ದು ನಿಜವಾದರೆ ನಟನಿಗೆ ಒಂದಷ್ಟು ತೊಂದರೆ ಆಗಲಿದೆ. ಭಯೋತ್ಪಾದಕರ ಜೊತೆ ನಂಟು ಹೊಂದಿದ ವ್ಯಕ್ತಿ ಎಂದು ಸಲ್ಮಾನ್ ಖಾನ್ ಮೇಲೆ ಕಣ್ಣಿ ಇಡಲಾಗುತ್ತದೆ. ಹಾಗಾಗಿ ಅವರ ಚಲನವಲನದ ಮೇಲೆ ಕಣ್ಣು ಇಡಲಾಗುತ್ತದೆ. ಪಾಕಿಸ್ತಾನದೊಳಗೆ ಅವರ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ.
























