ಮೊಬೈಲ್ ಸಮೇತ ಸಿಕ್ಕಿಬಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ
ಬೆಂಗಳೂರು: ಪರಪ್ಪನ್ನ ಅಗ್ರಹಾರ ಜೈಲಿನಲ್ಲಿ 20 ಸಾವಿರ ರೂ.ಗೆ ಮೊಬೈಲ್ ಮಾರಾಟ ಮಾಡಲು ಹೋಗಿ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದ ಘಟನೆ ನಡೆದಿದೆ.
ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಜೈಲು ವೀಕ್ಷಕ (ವಾರ್ಡನ್) ಅಮರ್ ಪ್ರಾಂಜೆಯನ್ನು (29) ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಮಾರಾಟ ಮಾಡುತ್ತಿದ್ದಾಗಲೇ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಿಂದ ಕಾರಾಗೃಹದಲ್ಲಿ ಅಕ್ರಮಗಳಿಗೆ ಜೈಲು ಸಿಬ್ಬಂದಿಗಳೇ ಸಾಥ್ ನೀಡ್ತಿದ್ದಾರೆ ಅನ್ನೋದು ಮತ್ತೊಮ್ಮೆ ಬಯಲಾಗಿದೆ.
ಅಮರ್ ಅಕ್ಟೋಬರ್ 23ರಂದು ಕರ್ತವ್ಯಕ್ಕೆ ಆಗಮಿಸಿದ್ದ. ಈ ವೇಳೆ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆಗೆ ಒಳಪಡಿಸಲು ಮುಂದಾದಾಗ ಅಮರ್ ತಪಾಸಣೆ ನಿರಾಕರಿಸಿದ್ದ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಅವನನ್ನು ಹಿಡಿದು ತಪಾಸಣೆ ನಡೆಸಿದಾಗ ಒಳುಡುಪಿನಲ್ಲಿ ಒಂದು ಸ್ಮಾರ್ಟ್‌ಫೋನ್, ಇಯರ್ ಫೋನ್ ಪತ್ತೆಯಾಗಿದೆ. ತಕ್ಷಣ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಮರ್ ಪ್ರಾಂಜೆಯನ್ನು ಬಂಧಿಸಿದ್ದಾರೆ. ಜೈಲು ಅಧೀಕ್ಷಕ ಎಚ್.ಎ ಪರಮೇಶ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬನಿಂದ 20 ಸಾವಿರ ರೂ. ಪಡೆದು ಹೊರಗಡೆಯಿಂದ ಮೊಬೈಲ್ ತಂದು ಕೊಡಲು ಒಪ್ಪಿದ್ದ. ಅದರಂತೆ 10 ಸಾವಿರ ರೂ. ಮುಂಗಡ ಪಡೆದು ಮೊಬೈಲ್ ತಂದಿದ್ದ. ಮೊಬೈಲ್ ಖರೀದಿಗೆ ಹಣ ಕೊಟ್ಟಿದ್ದ ಕೈದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ತಿರ್ಮಾನಿಸಿದ್ದಾರೆ. ಅಮರ್ ಪ್ರಾಂಜೆ 2019ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀಕ್ಷಕನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ.
























