ರಾಜ್ಯದಲ್ಲಿ ಬೆಲೆ ಏರಿಸಿರುವುದಷ್ಟೆ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕೆ
ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿ ಜನತೆಗೆ ನೆಮ್ಮದಿ ನೀಡಿದರೆ, ರಾಜ್ಯ ಸರ್ಕಾರ ಪ್ರತಿಯೊಂದು ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರದ ಜಿಎಸ್‌ಟಿ ದರ ಇಳಿಕೆ ಕುರಿತು ಶಾಸಕ ವೇದವ್ಯಾಸ ಕಾಮತ್ ಮನೆಮನೆಗೆ ಕರಪತ್ರ ವಿತರಣೆ ಕಾರ್ಯ ಆರಂಭಿಸಿದಾಗ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜ ಮತ್ತು ಪದ್ಮರಾಜ್ ಅವರಲ್ಲಿ ಹೊಟ್ಟೆಕಿಚ್ಚು ಶುರುವಾಗಿದೆ. ಜನರಿಗೆ ಸಿಗುತ್ತಿರುವ ಪ್ರಯೋಜನವೇ ಇವರಿಗೆ ಅಸಹ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇತ್ತೀಚೆಗೆ ಪದ್ಮರಾಜ್ ಹಾಗೂ ಐವನ್ ಡಿಸೋಜ ಜಿಎಸ್‌ಟಿ ಹೇಳಿಕೆಗೆ ಕೌಂಟರ್ ನೀಡುವ ಸಲುವಾಗಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿ ಬಿಜೆಪಿ ವಕ್ತಾರ ಅರುಣ್ ಶೇಟ್, ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಜಿಎಸ್‌ಟಿ ಇಳಿಕೆಯಿಂದ ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಹಲವಾರು ಅಗತ್ಯ ವಸ್ತುಗಳಿಗೆ ಶೂನ್ಯ ದರ ವಿಧಿಸಲಾಗಿದೆ. ಇದರ ಪ್ರಯೋಜನ ಜನರ ಮನೆಮನೆಗೆ ತಲುಪುತ್ತಿದೆ ಎಂದಿದ್ದಾರೆ.
ಐವನ್ ಡಿಸೋಜ ಜಿಎಸ್‌ಟಿ ಇಳಿಸಿದಕ್ಕೆ ಜನರು ಸೊಪ್ಪು ಹಾಕಿಲ್ಲ ಎನ್ನುತ್ತಾರೆ, ಆದರೆ ಹಾಗೆ ಹೇಳುವ ಅವರು ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ ಬೇಕಾದರೆ ಅವರು ಅದನ್ನು ಹಾಕಿಕೊಳ್ಳಬಹುದು ಎಂದರು. ಕಲ್ಲು-ಮರಳು ಸಮಸ್ಯೆ ನಿವಾರಣೆಯಾಗಿದೆ ಎಂದು ತನ್ನ ಬೆನ್ನನ್ನೇ ಚಪ್ಪರಿಸಿಕೊಳ್ಳುವವರಿಗೆ ಬಿಜೆಪಿ ಪ್ರತಿಭಟನೆ ಮಾಡುವವರಿಗೆ ಸಮಸ್ಯೆಯ ಅರಿವೇ ಆಗಿರಲಿಲ್ಲ. ಪ್ರತಿಭಟನೆ ಕರೆದ ಬಳಿಕ ಪ್ರೆಸ್‌ಮೀಟ್ ಮಾಡಿದ್ದಾರೆ. ಆದರೂ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಆರೋಗ್ಯ ವಿಮೆಗೆ ಜಿಎಸ್‌ಟಿ ವಿಧಿಸಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರ ಆಡಳಿತದಲ್ಲಿ ವ್ಯಾಟ್ 12.5% ಇತ್ತು. ಈಗ ತೆರಿಗೆ ಕಡಿಮೆ ಆಗಿದೆ. ಅಂಚೆ ಕಚೇರಿಗಳಲ್ಲಿ ಜೀವವಿಮೆ ಯೋಜನೆಗಳ ಸೌಲಭ್ಯವಿದೆ, ಆದರೆ ಜನರ ಹಿತಾಸಕ್ತಿಗಿಂತ ಪಕ್ಷದ ಲಾಭದತ್ತ ಕಾಂಗ್ರೆಸ್ ಮುಖಮಾಡಿದೆ. ಯುಪಿಎ ಆಡಳಿತಾವಧಿಯಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳು ಜಿಎಸ್‌ಟಿಗಿಂತ ಹೆಚ್ಚಾಗಿದ್ದವು. ಈಗ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಿಗೆ ಶೂನ್ಯ ಅಥವಾ ಶೇ.4ರಷ್ಟು ಮಾತ್ರ ತೆರಿಗೆ ವಿಧಿಸಿದೆ. ಆದರೂ ಕಾಂಗ್ರೆಸ್ ನಾಯಕರಿಗೆ ಅದು ಗೋಚರಿಸುತ್ತಿಲ್ಲ. ಚಿನ್ನದ ದರ ಏರಿಕೆಯನ್ನೂ ಸರ್ಕಾರದ ಮೇಲೆ ಹಾಕುತ್ತಾರೆ. ಆದರೆ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರಿತವಾಗಿದೆ. ಮೋದಿ ಸರ್ಕಾರ ಚಿನ್ನದ ಅಮದು ತೆರಿಗೆಯನ್ನು 15%ರಿಂದ 6%ಕ್ಕೆ ಇಳಿಸಿದೆ ಎಂದು ಹೇಳಿದರು.
ಹಾಲಿನ ದರ 39 ರೂ.ನಿಂದ 50 ರೂ.ಗೆ ಏರಿಕೆಗೊಂಡಿದೆ. ಇಂಧನ, ವಿದ್ಯುತ್ ದರ, ಸ್ಮಾರ್ಟ್ ಮೀಟರ್ ಶುಲ್ಕ ಇವುಗಳೆಲ್ಲ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ಫಲ. ಉದ್ಯೋಗಿಗಳ ಪಿಂಚಣಿಗಾಗಿ ವಿದ್ಯುತ್ ಗ್ರಾಹಕರಿಂದ ವಸೂಲಿ ನಡೆಸುತ್ತಿದ್ದಾರೆ. ರಾಜ್ಯದ ರಸ್ತೆಗಳ ಸ್ಥಿತಿ ಬಿಕ್ಕಟ್ಟಾಗಿದೆ, ಹೂಡಿಕೆದಾರರು ಇಲ್ಲಿನ ಮೂಲಸೌಕರ್ಯ ಕಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಅರುಣ್ ಶೇಟ್ ತೀವ್ರ ಟೀಕೆ ಮಾಡಿದರು.
ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿ ಅಭಿವೃದ್ಧಿಯ ಸುದ್ದಿಗಳೇ ತುಂಬಿಕೊಂಡಿದ್ದವು. ಆದರೆ ಇಂದಿನ ಕಾಂಗ್ರೆಸ್ ಆಡಳಿತದಲ್ಲಿ ಸಮಸ್ಯೆಗಳೇ ಸುದ್ದಿ ಆಗಿವೆ. ರಾಜ್ಯಕ್ಕೆ ಜಿಎಸ್‌ಟಿ ಮರುಪಾವತಿ ಆಗುತ್ತಿಲ್ಲ ಎಂಬ ಸುಳ್ಳು ಹೇಳಿಕೆ ನೀಡುವ ಹಣಕಾಸು ನಚಿವರಿಗೆ ಸಾಕ್ಷಿ ಕೇಳಿದಾಗ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. 135 ಸೀಟುಗಳ ಅಧಿಕಾರ ಹೊಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಗಿಂತ ಅಧಿಕಾರದ ಕಸರತ್ತು, ಸಿಎಂ-ಡಿಸಿಎಂ ಬದಲಾವಣೆಗಳ ಕುರಿತ ಚರ್ಚೆಯಲ್ಲೇ ಕಾಲಹರಣ ಮಾಡುತ್ತಿದೆ. ಮನಪಾಗೆ ಅನುದಾನ ನೀಡದೆ ಅಭಿವೃದ್ಧಿ ತಡೆಗಟ್ಟುತ್ತಿದೆ ಎಂದು ಲೇವಡಿ ಮಾಡಿದರು.
























