ಶಬರಿಮಲೆ ಬಳಿಕ ಇನ್ನೊಂದು ಪ್ರಸಿದ್ಧ ದೇವಸ್ಥಾನದ ಚಿನ್ನಕ್ಕೆ ಕನ್ನ
ತಿರುವನಂತಪುರಂ : ಶಬರಿಮಲೆಯ ಬಳಿಕ ಇದೀಗ ಕೇರಳದ ಇನ್ನೊಂದು ಪ್ರಸಿದ್ಧ ದೇವಸ್ಥಾನ ಗುರುವಾಯೂರು ದೇವಸ್ಥಾನದಲ್ಲೂ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕೇರಳದಲ್ಲಿ 12 ಪ್ರಸಿದ್ಧ ದೇವಸ್ಥಾನಗಳ ಆಡಳಿತ ನಿಭಾಯಿಸುವ ಸರ್ಕಾರದ ಗುರುವಾಯೂರು ದೇವಸ್ವಂ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್ ಸ್ಕೀಮ್ನಲ್ಲಿ ಇಡಲಾಗಿದ್ದ ಠೇವಣಿಗಳಿಂದ 79 ಲಕ್ಷ ರೂ ನಷ್ಟವಾಗಿರುವುದನ್ನು ತೋರಿಸಲಾಗಿದೆ.
2019-20 ಮತ್ತು 2020-21ರ ಅವಧಿಯಲ್ಲಿ ಗುರುವಾಯೂರು ದೇವಸ್ವಂ ಮಂಡಳಿಯ ಆಡಿಟಿಂಗ್ ಅನ್ನು ಸರ್ಕಾರದಿಂದ ನಡೆಸಲಾಗಿತ್ತು. ಅದರ ವರದಿಯು ಈಗ ಬೆಳಕಿಗೆ ಬಂದಿದೆ. ಆದಾಯ ಮತ್ತು ವೆಚ್ಚದ ಲೆಕ್ಕದಲ್ಲಿ ವ್ಯತ್ಯಾಸ ಗೊತ್ತಾಗಿದೆ. ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳ ಪರಿಶೀಲನೆಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂಬುದು ಗೊತ್ತಾಗಿದೆ. ಒಟ್ಟಾರೆ 25 ಕೋಟಿ ರೂ ಮೊತ್ತದ ವಸ್ತುಗಳಿಗೆ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.
ಗುರುವಾಯೂರು ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವುದು ಹಾಗೂ ಆಡಳಿತ ನಿರ್ವಹಣೆ ಸರಿಯಾಗಿ ಆಗದೇ ಇರುವುದು ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕೇರಳದ ಎಡಪಂಥೀಯ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗುರುವಾಯೂರ್ ದೇವಸ್ವಾಮ್ ಮಂಡಳಿ ಈ ಆಡಿಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, ಈ ಮಾಹಿತಿಯನ್ನು ಕೇರಳ ಹೈಕೋರ್ಟ್ಗೆ ವಿವರಾದ ಅಫಿಡವಿಟ್ ಮೂಲಕ ಸಲ್ಲಿಸಲಾಗಿದೆ ಎಂದು ಹೇಳಿದೆ. ಕೇರಳ ಸರ್ಕಾರ ಕೂಡ ಇದೇ ಅಭಿಪ್ರಾಯ ನೀಡಿದೆ.
ಕೆಲದಿನಗಳ ಹಿಂದೆ ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳ ಚಿನ್ನ ಕಳ್ಳತನವಾಗಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಕೋಟಿಗಟ್ಟಲೆ ಬೆಲೆಬಾಳುವ ಚಿನ್ನ ಕಳ್ಳತನ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿ ಬೆಂಗಳೂರಿನ ಓರ್ವ ಉದ್ಯಮಿ ಸಹಿತ ಕೆಲವರನ್ನು ಬಂಧಿಸಲಾಗಿದೆ. ಕೇರಳದ ಕಮ್ಯುನಿಷ್ಟ್ ಸರ್ಕಾರದ ದುರಾಡಳಿತವೇ ಹಿಂದೂ ದೇವಸ್ಥಾನಗಳ ಚಿನ್ನ ಕಳ್ಳತನಕ್ಕೆ ಕಾರಣ ಎಂದು ಪ್ರತಿಭಟನೆಗಳು ನಡೆದಿವೆ.
























