ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ಮಲತಂದೆ ಬಂಧನ

ಐದು ವರ್ಷ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿ ಪೀಡಿಸಿದ್ದ ತಂದೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆಕೆಯ ಮಲತಂದೆಯೇ ಹಲವು ವರ್ಷಗಳಿಂದ ಅತ್ಯಾಚಾರಗೈದ ಆಘಾತಕಾರಿ ಘಟನೆ ಉಳ್ಳಾಲದಲ್ಲಿ ಬೆಳಕಿಗೆ ಬಂದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಮೀರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಂದೆ ಮೃತಪಟ್ಟ ಬಳಿಕ ಆಕೆಯ ತಾಯಿ ಅಮೀರ್ ಎಂಬಾತನ ಜೊತೆ ವಿವಾಹವಾಗಿ ಕುಂಪಲದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಈ ಮಧ್ಯೆ ತಾಯಿ ಹಾಗೂ ಅಪ್ರಾಪ್ತೆ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಅಮೀರ್ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂದರ್ಭ ಅಪ್ರಾಪ್ತೆ ಕಿರುಚಾಡಿದಾಗ ಆಕೆಯ ಬಾಯಿಗೆ ತಲೆದಿಂಬು ಇಟ್ಟು ಬಾಯಿ ಮುಚ್ಚಿಸಿದ್ದ. ಆಗ ಬಾಲಕಿಗೆ ಕೇವಲ 7 ವರ್ಷ ಪ್ರಾಯವಾಗಿತ್ತು.





















































 
 

ಈ ಘಟನೆ ಬಳಿಕ ಬಾಲಕಿ ಅಜ್ಜಿ ಮನೆಯಲ್ಲಿ ವಾಸವಾಗಿ ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಳು. ಅಲ್ಲಿಂದ ತಾಯಿಯನ್ನು ನೋಡಲು ಆಗಾಗ ಬರುತ್ತಿದ್ದ ಬಾಲಕಿಯ ಮೇಲೆ ಅಮೀರ್‌ ಬೆದರಿಸಿ ಅತ್ಯಾಚಾರ ಎಸಗುತ್ತಿದ್ದ. ಬಾಲಕಿಗೆ 12 ವರ್ಷವಾಗುವವರೆಗೂ ಅವಕಾಶ ಸಿಕ್ಕಿದಾಗಲೆಲ್ಲ ಅಮೀರ್‌ ಅತ್ಯಾಚಾರ ಎಸಗುತ್ತಿದ್ದ. ಕೆಲ ಸಮಯದ ಬಳಿಕ ಆಕೆ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಈ ವಿಚಾರ ಅಜ್ಜಿ ಮನೆಯವರಿಗೂ ಗೊತ್ತಾಗಿತ್ತು. ಆದರೆ ಮರ್ಯಾದೆಗೆ ಅಂಜಿ ತಾಯಿ ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ.

ಅ.18ರಂದು ಅನಾರೋಗ್ಯಕ್ಕೀಡಾದ ಬಾಲಕಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾನಸಿಕವಾಗಿ ಖಿನ್ನಲಾಗಿದ್ದ ಬಾಲಕಿಯನ್ನು ಅಲ್ಲಿ ಕೌನ್ಸೆಲಿಂಗ್‌ಗೆ ಒಳಪಡಿಸಿದಾಗ ತಂದೆಯಿಂದ ನಿರಂತರವಾಗಿ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಿಳಿಸಿದ್ದಾಳೆ. ಬಳಿಕ ಸಂತ್ರಸ್ತೆ ಬಾಲಕಿ ಉಳ್ಳಾಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಅಮೀರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

error: Content is protected !!
Scroll to Top