ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಹಬ್ಬವನ್ನು ಸಂಭ್ರಮಿಸಿ ಎಂದು ಕರೆ ನೀಡಿದ ಮೋದಿ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಈ ಬೆಳಕಿನ ಹಬ್ಬವು ಜನರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಲಿ ಎಂದು ದೀಪಾವಳಿ ಶುಭಾಶಯ ಕೋರಿ ಹಾರೈಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಶುಭಕೋರಿರುವ ಮೋದಿ, ಈ ಬೆಳಕಿನ ಹಬ್ಬವು ನಮ್ಮೆಲ್ಲರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕತೆಯ ಮನೋಭಾವ ಮೇಲುಗೈ ಸಾಧಿಸಲಿ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ದೀಪಾವಳಿ ಶುಭಾಶಯ ಕೋರಿದ್ದು, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೀಪಗಳ, ಸಂತೋಷದ ಹಬ್ಬ ದೀಪಾವಳಿ ಶುಭಾಶಯಗಳು. ಎಲ್ಲರ ಆರೋಗ್ಯ ಮತ್ತು ಸಮೃದ್ಧಿಗಾಗಿ ನಾನು ಭಗವಾನ್ ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.
ದೇಶದ ಜನರಿಗೆ ಹಬ್ಬದ ಸಮಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಂತೆ ಮೋದಿ ಕರೆ ನೀಡಿದ್ದಾರೆ. ದೇಶಿಯ ಸರಕುಗಳ ಖರೀದಿಯನ್ನು ಪ್ರೋತ್ಸಾಹಿಸಿ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಿ. 140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಆಚರಿಸುವ ಮೂಲಕ ಈ ಹಬ್ಬವನ್ನು ಸಂಭ್ರಮಿಸೋಣ. ಭಾರತೀಯ ಉತ್ಪನ್ನಗಳನ್ನು ಖರೀದಿಸಿ, ಗರ್ವದಿಂದ ಇದು ಸ್ವದೇಶಿ ಉತ್ಪನ್ನ ಎಂದು ನೀವು ಖರೀದಿಸಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಳ್ಳಿ. ಈ ಮೂಲಕ ಇತರರನ್ನು ಪ್ರೇರೇಪಿಸಿ ಎಂದಿದ್ದಾರೆ.
























