ಬಾಲ್ಯದಲ್ಲಿ ತಂದೆಯ ಜೊತೆಗೆ ಗಣವೇಷದಲ್ಲಿದ್ದ ಫೋಟೊ ಹಂಚಿಕೊಂಡು ಉತ್ತರ
ಕಾರ್ಕಳ: ನಿಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಸೇರಿಸಿದ್ದೀರಾ. ಅವರಿಗೆ ಲಾಠಿ, ಗನ್ ಟ್ರೈನಿಂಗ್ ಕೊಟ್ಟಿದ್ದೀರಾ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಕಾರ್ಕಳದ ಬಿಜೆಪಿ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ತನ್ನದೇ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುನಿಲ್ ಕುಮಾರ್, ನನ್ನ ತಂದೆಯ ಜೊತೆ ತಾನು ಬಾಲ್ಯದಲ್ಲಿ ಆರ್‌ಎಸ್‌ಎಸ್ ಗಣವೇಷದಲ್ಲಿರುವ ಹಾಗೂ ಈಗ ತನ್ನ ಮಗನ ಜೊತೆ ಗಣವೇಷದಲ್ಲಿರುವ ಫೋಟೊ ಹಾಕಿ ನಾನು ಮತ್ತು ನನ್ನ ಪುತ್ರ ಆರ್‌ಎಸ್‌ಎಸ್ ಸ್ವಯಂಸೇವಕರು. ನನ್ನ ತಂದೆ ಶಾಸಕ ಅಲ್ಲ, ನಾನು ನನ್ನ ಪುತ್ರನನ್ನು ಶಾಸಕ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಬ್ಯಾನ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಕಾರ್ಕಳದ ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಸಡ್ಡು ಹೊಡೆದಿದ್ದಾರೆ. ಕಾರ್ಕಳ ಪೇಟೆಯಲ್ಲಿ ಇವತ್ತು ಆರ್‌ಎಸ್‌ಎಸ್ ಪಥಸಂಚಲನ ನಡೆದಿದೆ. ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಅನಂತಶಯನ ದೇವಸ್ಥಾನದವರೆಗೆ ಬೃಹತ್ ಪರೇಡ್ ಮಾಡಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಸಹಿತ ನೂರಾರು ಜನ ಭಾಗವಹಿಸಿದ್ದರು.
























