ಪ್ರತಾಪ್ ಸಿಂಹ ವಿರುದ್ಧದ ಚು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು: ಅಧಿಕಾರಿಗಳು ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪ ಪಟ್ಟಿ ಸಲ್ಲಿಕೆ ಮಾಡುತ್ತಾರೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಈ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದು ಮಾಡುವಂತೆ ಸಿಂಹ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು‌. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಪ್ರಕರಣದ ಆರೋಪಗಳು ಐಪಿಸಿ ಸೆಕ್ಷನ್ 171ಎಚ್ (ಚುನಾವಣೆಗೆ ಸಂಬಂಧಿಸಿದ ಅಕ್ರಮ ಪಾವತಿಗಳು) ಅಥವಾ ಸೆಕ್ಷನ್ 188 (ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ) ಅಡಿಯಲ್ಲಿ ಅನ್ವಯಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ನ್ಯಾಯಪೀಠದ ಅಭಿಪ್ರಾಯದಲ್ಲಿ, ಸಬ್‌ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಯೊಬ್ಬರು ಆರೋಪಪಟ್ಟಿ ಸಲ್ಲಿಸಿದ್ದು, ಸೆಕ್ಷನ್‌ಗಳ ಮಧ್ಯೆ ಇರುವ ಕಾನೂನುಬದ್ಧ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಕ್ರಮ ಕೈಗೊಂಡಿದ್ದಾರೆ. ಪ್ರಮುಖರಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲವೊಮ್ಮೆ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಆ ಮೂಲಕ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯವೇ ರದ್ದುಪಡಿಸಿದೆ ಎಂಬಂತೆ ಬಿಂಬಿಸುವ ಯತ್ನ ಮಾಡುತ್ತಾರೆ. ಅಧಿಕಾರಿಗಳು ಪ್ರಕರಣ ದಾಖಲು ಮಾಡಬೇಕು, ಅವುಗಳು ವಿಫಲವಾಗಬೇಕು ಎನ್ನುವ ಧೋರಣೆಯನ್ನೇ ಇಟ್ಟುಕೊಂಡಿರುತ್ತಾರೆ. ಅಧಿಕಾರಿಗಳು ಎಲ್ಲವೂ ತಿಳಿದಿದ್ದರೂ ಹೀಗೆ ಮಾಡುತ್ತಾರೆ ಎಂದು ನ್ಯಾಯಾಲಯ ಅಸಮಧಾನ ತೋರ್ಪಡಿಸಿದೆ.





















































 
 
error: Content is protected !!
Scroll to Top