ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೆ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರು
ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈಗ ತಾನೇ ಕಮಿಷನ್ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಗುತ್ತಿಗೆದಾರರು ಸರ್ಕಾರದ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಷ್ಕರ ಹೂಡುವುದಾಗಿ ಎಚ್ಚರಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಸಮಸ್ಯೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ ಇನ್ನೂ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರು ಸಿಡಿದೆದ್ದಿದ್‌ದು, ಕರ್ನಾಟಕ ರಾಜ್ಯ ಗುತ್ತಿಗೆದಾದರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಕಮಿಷನ್ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಜಾಸ್ತಿಯಾಗಿದೆ. ಆದರೆ, 60, 80 ಪರ್ಸೆಂಟ್ ಎಂದು ನಾವು ಹೇಳಿಲ್ಲ ಎಂದಿದ್ದಾರೆ.
52 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿತ್ತು. ಕೆಲ ಇಲಾಖೆಗಳು ಹಣ ಬಿಡುಗಡೆ ಮಾಡಿದ್ದು, 33 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಇನ್ನೊಂದು ತಿಂಗಳು ಕಾಯುತ್ತೇವೆ. ಆಗಲೂ ಹಣ ಬಿಡುಗಡೆಯಾಗಿಲ್ಲ ಎಂದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಬಾಕಿ ಮೊತ್ತ ಬಿಡುಗಡೆಯಾಗದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ಬರಲಿದೆ ಎಂದು ಗುತ್ತಿಗೆದಾರರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಕಮಿಷನ್ ಆರೋಪದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರ್ಟ್‌ಗೆ ಹೋಗಲಿ ಎಂದಿದ್ದಾರೆ. ಗುತ್ತಿಗೆದಾರರಿಂದ ಈ ರೀತಿ ಮಾಡಿಸುತ್ತಾ ಇದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಮಂಜುನಾಥ್, ನಾವು ಕೋರ್ಟ್‌ಗೆ ಹೋಗಲ್ಲ. ಮುಷ್ಕರ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂ. ಬರಬೇಕಿದೆ. ಅದರಲ್ಲೂ ಡಿ.ಕೆ ಶಿವಕುಮಾರ್ ಅವರ ನೀರಾವರಿ ಇಲಾಖೆಯಲ್ಲೇ 12 ಸಾವಿರ ಕೋಟಿ ರೂ. ಬಾಕಿ ಇದೆ. ಸತೀಶ್ ಜಾರಕಿಹೊಳಿ ಅವರ ಲೋಕೋಪಯೋಗಿ ಇಲಾಖೆ 9 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಸಂತೋಷ್ ಲಾಡ್, ಬೈರತಿ ಇಲಾಖೆಯಲ್ಲಿ ಕಮಿಷನ್‌ಗೆ ಬೇಡಿಕೆಯಿದೆ. ಟೆಂಡರ್ ಪಡೆಯುವ ಮುನ್ನವೇ ಅಧಿಕಾರಿಗಳಿಂದ 10-15% ಕಮಿಷನ್‌ಗೆ ಒತ್ತಡ ಬರುತ್ತಿದೆ. ಈಗಾಗಲೇ ಸಚಿವರಿಗೂ ಕಮಿಷನ್ ಬಗ್ಗೆ ಮಾಹಿತಿ ನೀಡಲಾಗಿದೆ. ಶೇ.70ರಷ್ಟು ಶಾಸಕರು ಕಮಿಷನ್‌ಗಾಗಿ ಬೇಡಿಕೆ ಇಡುತ್ತಿದ್ದಾರೆ. ಹೊರರಾಜ್ಯದವರಿಗೆ ಅನುಕೂಲ ಮಾಡಿಕೊಡಲು 38 ಕೋಟಿ ರೂ. ಪ್ಯಾಕೇಜ್ ಟೆಂಡರ್ ಒಟ್ಟಿಗೆ ಮಾಡಿಕೊಟ್ಟಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
























