ಸಿಎಂ ಮನೆಯಲ್ಲೂ ನಡೆಯಿತು ಜಾತಿ ಗಣತಿ

ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಗಳ ಕಾಲ ಸಮಾಧಾನದಿಂದ ಗುರುವಾರ ಉತ್ತರ ನೀಡಿದರು. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಗಣತಿದಾರರಿಗೆ ಮಾಹಿತಿ ನೀಡಿದರು. ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು.

ಮನೆ ಸಮೀಕ್ಷೆ ಬಳಿಕ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ಸಮೀಕ್ಷೆಗಾಗಿ ನನ್ನ ಮನೆಗೆ ಭೇಟಿ ನೀಡಿದ ಸಿಬ್ಬಂದಿಗೆ ಮಾಹಿತಿ ನೀಡಿ, ನನ್ನ ಕರ್ತವ್ಯ ಯಶಸ್ವಿಯಾಗಿ ಪೂರೈಸಿದ್ದೇನೆ. ಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರ ಈ ಸಮೀಕ್ಷೆಯನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.





















































 
 

ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಆಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿಯ ಬಗೆಗೆ ನಿಖರ ಮಾಹಿತಿ ದೊರೆತು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಕರೆ ನೀಡಿದ್ದಾರೆ.

ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ, ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವೈಜ್ಞಾನಿಕ ಪ್ರಯತ್ನ, ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಖಂಡಿತಾ ಆಗದು. ಚಿಂತೆ ಬಿಟ್ಟು, ಧೈರ್ಯವಾಗಿ ಸಿಬ್ಬಂದಿ ಗಳ ಜೊತೆ ಮಾಹಿತಿ ಹಂಚಿಕೊಳ್ಳಿ ಎಂದು ಮನವಿ ಮಾಡಿದರು.

error: Content is protected !!
Scroll to Top