ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ ಎಂದು ಹಿಂದೇಟು
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಸುತ್ತಿರುವ ಜಾತಿ ಗಣತಿಗೆ ಮಾಹಿತಿ ನೀಡಲು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ನಿರಾಕರಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದ್ದು, ನಾರಾಯಣ ಮೂರ್ತಿ ದಂಪತಿ ಈ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎನ್.ಆರ್. ನಾರಾಯಣಮೂರ್ತಿ ಸ್ವಯಂ ದೃಢೀಕರಣ ಪತ್ರ ಸರ್ಕಾರಕ್ಕೆ ನೀಡಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇನೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ನಾವು ಹಿಂದುಳಿದ ಯಾವ ಜನಾಂಗಕ್ಕೂ ಸೇರಿದವರಲ್ಲ. ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಇದರಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗಣತಿದಾರರು ಸಮೀಕ್ಷೆಗಾಗಿ ಜಯನಗರ 4ನೇ ಬ್ಲಾಕ್ನಲ್ಲಿರುವ ನಾರಾಯಣಮೂರ್ತಿ ಅವರ ಮನೆಗೆ ತೆರಳಿದ್ದ ವೇಳೆ ನಾರಾಯಣ ಮೂರ್ತಿ ದಂಪತಿಯಿಂದ ಅನಿರೀಕ್ಷಿತ ಉತ್ತರ ಸಿಕ್ಕಿದೆ.
ನಾರಾಯಣಮೂರ್ತಿ ಸ್ವಯಂ ದೃಢೀಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಯಾರನ್ನೂ ಬಲವಂತ ಮಾಡುವಂತಿಲ್ಲ. ಭಾಗವಹಿಸುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ.
























