ಅನಾರೋಗ್ಯವಿದ್ದ ಪತ್ನಿಯನ್ನು ಅನೆಸ್ತೇಶಿಯ ಇಂಜೆಕ್ಷನ್ ನೀಡಿ ಕೊಂದಿದ್ದ ಟಾಕ್ಟರ್ ಪತಿ
ಬೆಂಗಳೂರು: ನಗರದಲ್ಲಿ ವೈದ್ಯೆಯೊಬ್ಬರನ್ನು ಆಕೆಯ ಡಾಕ್ಟರ್ ಪತಿಯೇ ಅನೆಸ್ತೇಶಿಯ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪ್ರಕರಣ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಮಗಳ ಸಾವಿನಿಂದ ತೀವ್ರ ನೊಂದಿರುವ ತಂದೆ ಮಗಳಿಗಾಗಿ ಕಟ್ಟಿಸಿದ್ದ 4 ಕೋ.ರೂ. ಮೌಲ್ಯದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ್ದಾರೆ.
ಮಗಳ ಸಾವಿನ ನೋವಿನಲ್ಲಿ ತಂದೆ ಮುನಿರೆಡ್ಡಿ ಮಗಳು ವಾಸವಿದ್ದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ್ದಾರೆ. ಮಗಳಿಗಾಗಿ ನಾಲ್ಕು ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ದರು. ಈ ಮನೆಗೆ ಹೋದಾಗ ಮಗಳ ನೆನಪು ಕಾಡುತ್ತಿದೆ ಎಂದು ಇಸ್ಕಾನ್ ದೇವಸ್ಥಾನಕ್ಕೆ ಮನೆ ದಾನ ಮಾಡಿದ್ದಾರೆ.
ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು ಮಾರತಹಳ್ಳಿ ಪೊಲೀಸರು ಘಟನೆ ಸಂಭವಿಸಿದ ಆರು ತಿಂಗಳ ಬಳಿಕ ಬಂಧಿಸಿದ್ದಾರೆ. ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿ ಇದು ಸಹಜ ಸಾವು ಎಂಬಂತೆಯೇ ಬಿಂಬಿಸಿದ್ದ.
ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ. ಡರ್ಮೆಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ. 2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ಕೃತಿಕಾಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲುತ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ.
ತವರು ಮನೆಯಲ್ಲಿ ಹುಷಾರಿಲ್ಲದೆ ಮಲಗಿದ್ದ ಕೃತಿಕಾಗೆ ಆರೋಪಿ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದ. ಎರಡು ದಿನ ನಿರಂತರ ಮೆಡಿಸಿನ್ ನೀಡಲಾಗಿತ್ತು. ಬಳಿಕ ಕಳೆದ ಏ.23ರಂದು ಅವರು ಜ್ಞಾನ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.
ಆಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಕುಟುಂಬದಿಂದ ದೂರು ಪಡೆದು ಯುಡಿಆರ್ ದಾಖಲು ಮಾಡಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹದ ಸ್ಯಾಂಪಲ್‌ನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು. ಕೇಸ್ ದಾಖಲಾದ ಬಳಿಕ ಆರೋಪಿ ಮಣಿಪಾಲಕ್ಕೆ ತೆರಳಿದ್ದ. ಅಲ್ಲಿಯೇ ಆತನನ್ನು ಬಂಧಿಸಲಾಗಿದೆ.
























