ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು, ಮಲ್ಪೆಯಲ್ಲಿ ಪ್ರವಾಸಿಗ ಜಲಸಮಾಧಿ

ಮೀನು ಹಿಡಿಯಲು ಹೋದ ಮಕ್ಕಳ ದುರಂತ ಅಂತ್ಯದಿಂದ ಇಡೀ ಗ್ರಾಮಕ್ಕೆ ಶೋಕ

ಉಡುಪಿ: ನಿನ್ನೆ ಒಂದೇ ದಿನ ಮಲ್ಪೆ ಮತ್ತು ಬೈಂದೂರಲ್ಲಿ ಸಮುದ್ರದಲ್ಲಿ ಮುಳುಗಿ ನಾಲ್ಕು ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ಸಂಭವಿಸಿದೆ. ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕಡಲ ಕಿನಾರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ಕಿರಿಮಂಜೇಶ್ವರ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ 15 ವರ್ಷ ವಯಸ್ಸಿನ ಆಶಿಶ್ ದೇವಾಡಿಗ, ಕಿರಿ ಮಂಜೇಶ್ವರ ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷ ವಯಸ್ಸಿನ ಸೂರಜ್ ಪೂಜಾರಿ ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ 18 ವರ್ಷ ವಯಸ್ಸಿನ ಸಂಕೇತ ದೇವಾಡಿಗ ಮೃತ ಬಾಲಕರು.

ಮಂಗಳವಾರ ಸಂಜೆ ಮಲ್ಪೆ ಕಡಲತೀರಕ್ಕೆ ಪ್ರವಾಸ ಬಂದಿದ್ದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾರಸಂದ್ರದ ವೆಂಕಟಾಚಲ (40) ಮೃತಪಟ್ಟಿರುವ ವ್ಯಕ್ತಿ. ಸೋಮವಾರ ಉಡುಪಿಗೆ ಇಬ್ಬರು ಗೆಳೆಯರ ಜೊತೆಗೆ ಪ್ರವಾಸ ಬಂದಿದ್ದ ಅವರು ಈಜಾಡುವಾಗ ಸಮುದ್ರದಲ್ಲಿ ಬಹುದೂರದ ತನಕ ಹೋಗಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಜೀವರಕ್ಷಕ ತಂಡದವರು ಅವರನ್ನು ರಕ್ಷಿಸಿ ದಡಕ್ಕೆ ತಂದರೂ ಬದುಕುಳಿಯಲಿಲ್ಲ.





















































 
 

ಬೈಂದೂರಿನ ಕೊಡೇರಿಯ ಹೊಸಹಿತ್ಲು ಕಡಲ ತೀರದಲ್ಲಿ ನಡೆದಿರುವ ದುರಂತ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ನೀರುಪಾಲಾದವರೆಲ್ಲರೂ ವಿದ್ಯಾಭ್ಯಾಸ ಮಾಡುತ್ತಿರುವ ಪುಟ್ಟ ಮಕ್ಕಳು. ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ ಮುಳುಗಡೆಯಾಗಿದ್ದಾರೆ. ಈ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದ್ದಾರೆ. ಕಡಲ ಮಕ್ಕಳ ಈ ಸಾಹಸ ಫಲ ನೀಡಲಿಲ್ಲ. ಅಷ್ಟರಲ್ಲಿಯೇ ಕಡಲ ಅಲೆಗಳಲ್ಲಿ ಮೂವರು ಮಕ್ಕಳು ಉಸಿರು ಚೆಲ್ಲಿದ್ದಾರೆ. ತಕ್ಷಣವೇ ಶವಗಳನ್ನು ಮೇಲಕ್ಕೆತ್ತಲಾಗಿದೆ.

ಕೂಲಿ ಮಾಡಿ ಜೀವನ ನಡೆಸುವ ಮನೆಯಿಂದ ಬಂದ ಈ ಮಕ್ಕಳ ಈ ಸಾವನ್ನು ಅರಗಿಸಿಕೊಳ್ಳಲು ಕುಟುಂಬ ಮಾತ್ರವಲ್ಲ, ಊರಿನವರಿಗೂ ಸಾಧ್ಯವಾಗುತ್ತಿಲ್ಲ. ವಿಷಯ ತಿಳಿಯುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಮಕ್ಕಳ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು.

error: Content is protected !!
Scroll to Top