ತುಲಾ ಮಾಸದ ಕೊನೆಯ ದಿನ ವಿಶೇಷ ಪೂಜೆ ಸಲ್ಲಿಸಲಿರುವ ರಾಷ್ಟ್ರಪತಿ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ತುಲಾ ಮಾಸ ಪೂಜೆಯ ಕೊನೆಯ ದಿನವಾದ ಅ.22ರಂದು ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಮೂಲಕ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಅ.21ರಂದು ಸಂಜೆ 6.20ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಿರುವನಂತಪುರಂಕ್ಕೆ ಆಗಮಿಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.22ರಂದು ತಿರುವನಂತಪುರದಿಂದ ಹೆಲಿಕಾಪ್ಟರ್ ಮೂಲಕ ನೀಲಕ್ಕಲ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗದಲ್ಲಿ ಪಂಪಾಗೆ ಆಗಮಿಸಲಿದ್ದಾರೆ.
ಪಂಪಾದಿಂದ ಗೂರ್ಖಾ ಫೋರ್ಸ್ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿ ಮಧ್ಯಾಹ್ನ 12.20ರಿಂದ 1 ಗಂಟೆಯ ಒಳಗೆ ಅಯ್ಯಪ್ಪ ದರ್ಶನ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಿಶೇಷ ವಾಹನದಲ್ಲಿ ಪಂಪಾದಿಂದ ನೀಲಕ್ಕಲ್‌ಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತಿರುವನಂತಪುರಕ್ಕೆ ಮರಳಲಿದ್ದಾರೆ.
ರಾಷ್ಟ್ರಪತಿಗಳು ಅಕ್ಟೋಬರ್ 24ರವರೆಗೆ ರಾಷ್ಟ್ರಪತಿಗಳು ಕೇರಳದಲ್ಲಿ ಇರಲಿದ್ದು, ಈ ಸಮಯದಲ್ಲಿ ತಿರುವನಂತಪುರಂ ಮತ್ತು ಕೊಟ್ಟಾಯಂ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ತುಲಾಮಾಸ ಪೂಜೆಗಾಗಿ ಶಬರಿಮಲೆ ದೇಗುಲದ ಬಾಗಿಲುಗಳನ್ನು ಅ.17ರಂದು ತೆರೆದು ಅ.22ರಂದು ಮುಚ್ಚಲಾಗುತ್ತದೆ.
























