ಸಂಪುಟ ಪುನರ್‌ ರಚನೆ ಪಕ್ಕಾ : ಔತಣಕೂಟದಲ್ಲಿ ಸಿದ್ದರಾಮಯ್ಯ ಸುಳಿವು

ಯಾವುದಕ್ಕೂ ಸಿದ್ಧವಾಗಿರಿ ಎಂದು ಸಚಿವರಿಗೆ ಕಿವಿಮಾತು ಹೇಳಿದ ಸಿಎಂ

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿದ್ದ ಡಿನ್ನರ್ ಪಾರ್ಟಿಸೋಮವಾರ ರಾತ್ರಿ ಸಂಪನ್ನಗೊಂಡಿದೆ. ಭರ್ಜರಿ ಊಟದ ಜೊತೆಗೆ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆಗಳು ಆಗಿವೆ. ಈ ವೇಳೆ ಸಿದ್ದರಾಮಯ್ಯನವರು ಸಚಿವರಿಗೆ ಕೆಲ ಕಿವಿಮಾತು ಕೇಳಿದ್ದಾರೆ. ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ಸಚಿವರಿಗೆ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಂಪುಟ ಪುನಾರಚನೆ ಆಗಲಿದೆ ಮತ್ತು ಕೆಲವರನ್ನು ಕೈಬಿಡುವುದು ಅನಿವಾರ್ಯ ಎನ್ನುವ ವಿಚಾರವನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿರ್ಬಂಧ, ಸಚಿವ ಸಂಪುಟ ಪುನರ್‌ರಚನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಅನುದಾನ ಬಳಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.





















































 
 

ಸರ್ಕಾರದ ಬಂದು ಎರಡೂವರೆ ವರ್ಷ ಆಗುತ್ತಿದೆ. ನಿಮ್ಮ ಇಲಾಖೆಗಳಲ್ಲಿ ಸುಧಾರಣೆ ತನ್ನಿ. ಬಿಜೆಪಿ ದುರಾಡಳಿತವನ್ನು ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ಜನಸಾಮಾನ್ಯರ ಪರ ಸರ್ಕಾರ ಇರಬೇಕಾಗುತ್ತದೆ. ಇಲಾಖೆಗಳ ಮೂಲಕ ಜನರ ಕೆಲಸ ಮಾಡಿ. ಇಲಾಖೆಗೂ ಒಳ್ಳೆಯ ಹೆಸರು ತನ್ನಿ, ಸರ್ಕಾರಕ್ಕೂ ಉತ್ತಮ ಹೆಸರು ತನ್ನಿ. ಗ್ಯಾರಂಟಿಗಳಿಂದ ಸ್ವಲ್ಪ ಅಭಿವೃದ್ಧಿಗೆ ಹಿನ್ನಡೆಯಾಗಿರಬಹುದು. ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ. ಆದಾಯದ ಮಾರ್ಗಗಳೂ ಓಪನ್‌ ಆಗುತ್ತಿವೆ. ಇಲಾಖೆಯಲ್ಲಿರುವ ಹಣ ಸದ್ಬಳಕೆ ಮಾಡಿ, ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡೋಣ ಎಂದು ಸಿದ್ದರಾಮಯ್ಯ ಸಚಿವರನ್ನು ಸಮಾಧಾನಿಸಿದ್ದಾರೆ.

ಸಂಪುಟ ಪುನಾರಚನೆ ವಿಚಾರವನ್ನ ಖುದ್ದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಸಂಪುಟ ಪುನಾರಚನೆ ಆಗಲಿದೆ ಸಿದ್ಧವಾಗಿರಿ ಎಂದು ಸಂಪುಟ ಸಹದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವಕಾಶ ಇದ್ದಾಗ ಚೆನ್ನಾಗಿ ಕೆಲಸ ಮಾಡಿ. ಹೈಕಮಾಂಡ್ ಕೂಡ ಎಲ್ಲವನ್ನು ಗಮನಿಸುತ್ತಿದೆ. ಮಾಧ್ಯಮಗಳ ವರದಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಮಯ ಬಂದಾಗ ವರಿಷ್ಠರು ನಿರ್ಧಾರ ಮಡುತ್ತಾರೆ. ಈಗ ಅಭಿವೃದ್ಧಿಯ ಕಡೆ ನಿಮ್ಮ‌ ಗಮನವಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ ಬಳಿಕ ಸಚಿವರಿಗೆ ಸಿಎಂ ಕಿವಿಮಾತು ಹೇಳಿದರು.

ಔತಣಕೂಟದಲ್ಲಿ ಬಿಹಾರ್ ಚುನಾವಣೆ ಬಗ್ಗೆ ಚರ್ಚೆಯಾಗಿದ್ದು, ಬಿಹಾರ ಚುನಾವಣೆಗೆ ಎಲ್ಲರ ಸಹಕಾರವಿರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಯಾವಾಗ ಬೇಕಾದರೂಸೂಚನೆ ಬರಬಹುದು. ಹೈಕಮಾಂಡ್‌ನಿಂದ ಸೂಚನೆ ಬಂದಾಗ ಪ್ರಚಾರಕ್ಕೆ ಅಲ್ಲಿಗೆ ಹೋಗಬೇಕಾಗುತ್ತದೆ. ಚುನಾವಣಾ ಕೆಲಸಕ್ಕೂ ರೆಡಿ ಇರಬೇಕು. ನಿಮ್ಮ ಎಲ್ಲ ಸಹಕಾರವೂ ಬೇಕಿದೆ ಎಂದಿದ್ದಾರೆ.

ಈ ವೇಳೆ ಕೆಲ ಸಚಿವರು ಸಿಎಂ ಬಳಿ ಪ್ರತ್ಯೇಕ ಮಾತುಕತೆ ನಡೆಸಲು ಬೇಡಿಕೆ ಇಟ್ಟರು. ಸಚಿವರ ಒನ್‌ ಟು ಒನ್‌ ಮಾತುಕತೆಗೆ ಸಿಎಂ ಒಪ್ಪಿಗೆ ನೀಡಿ ಸಚಿವರಿಗೆ 5 ನಿಮಿಷ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

error: Content is protected !!
Scroll to Top