ಡಿಕೆಶಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ದಿಢೀರ್‌ ಎಂದು ಕಾರ್ಯಕ್ರಮಕ್ಕೆ ಬಂದ ಮುನಿರತ್ನ

ಬೆಂಗಳೂರು : ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ಡಿ.ಕೆ ಶಿವಕುಮಾರ್ ಇಂದು ಮತ್ತಿಕೆರೆಯ ಜೆ.ಪಿ ಪಾರ್ಕ್​ನಲ್ಲಿ ಜನರೊಂದಿಗೆ ಸಂವಾದ ನಡೆಸುವ ವೇಳೆ ಹೈಡ್ರಾಮಾ ನಡೆಯಿತು. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆ.ಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿ.ಕೆ ಶಿವಕುಮಾರ್ ನಿರ್ಲಕ್ಷ್ಯಿಸಿದ್ದು, ಡಿಕೆಶಿ ವೇದಿಕೆಯಲ್ಲಿ ಕುಳಿತಾಗ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್​ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು. ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿ.ಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.

ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಕ್ಕೆ ಸಂಸದರು, ಶಾಸಕರಿಗೆ ಆಹ್ವಾನ ನೀಡದಿರುವುದು ತಪ್ಪು. ಇದು ಸಾರ್ವಜನಿಕ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮ ಎಂದು ಮುನಿರತ್ನ ಆರೋಪಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಬೆಂಬಲಿಗರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ವೇದಿಕೆಯಲ್ಲೇ ಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು. ಅಲ್ಲಿ ಸೇರಿದ್ದ ಜನರು ಮೂಕಪ್ರೇಕ್ಷಕರಾಗಿ ನಿಂತರು.





















































 
 

ರಾಜಕೀಯ ಮಾಡಲು ಇಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ‘ರೇಪಿಸ್ಟ್ ಮುನಿರತ್ನ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್​ನಿಂದ ಕರೆದೊಯ್ದರು.

ರೌಡಿಗಳನ್ನು ಕರೆಸಿ ಹಲ್ಲೆ

ನಂತರ ಪ್ರತಿಕ್ರಿಯಿಸಿ ಮುನಿರತ್ನ ಚನ್ನಪಟ್ಟಣ ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೇನೆ ಅಂದರೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ. ರೌಡಿಶೀಟರ್‌ಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ. ಅವರ ತಮ್ಮ ಸೋತಾಗಿನಿಂದ ನಾನು ಟಾರ್ಗೆಟ್‌ ಆಗಿದ್ದೇನೆ. ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.

ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್‌ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು.

ನನ್ನ ಮೇಲೆ ಮತ್ತಷ್ಟು ಕೇಸ್ ಹಾಕಲಿಕ್ಕೆ ತಯಾರಿ ಮಾಡುತ್ತಿದ್ದಾರೆ. ರೇಪ್ ಕೇಸ್ ಆಯ್ತು ದಲಿತನಿಂದನೆ ಆಯ್ತು ಈಗ ಪೋಕ್ಸೋ ಕೇಸ್‌ ಹಾಕಲಿಕ್ಕೆ ರೆಡಿ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೊಡಿಸುವುದು ಅವರ ಉದ್ದೇಶ. ಬೆಳಗ್ಗೆಯಿಂದ ಅವರ ಪಕ್ಕ ಇರುವವರನ್ನು ಶಾಸಕರನ್ನಾಗಿ ಮಾಡಲು ಅವರು ಬಹಳ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಸತ್ತರೂ ಇಲ್ಲೇ ಸಾಯುತ್ತೇನೆ. ರಾಜೀನಾಮೆ ನೀಡುವ ಮಾತೇ ಇಲ್ಲ ಎಂದು ಸಿಟ್ಟು ಹೊರಹಾಕಿದರು.

ಇವತ್ತು ಆರ್‌ಎಸ್‌ಎಸ್‌ ಸ್ಥಾಪನೆಯಾಗಿ ನೂರು ವರ್ಷ ಆಗಿದ್ದಕ್ಕೆ ನಾನು ಪಥಸಂಚಲನದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ಈ ಕ್ಷೇತ್ರದ ಪ್ರಜೆಯಾಗಿ ಜನರ ಮಧ್ಯೆ ಕುಳಿತಿದ್ದರೆ, ಏಯ್‌ ಕರಿ ಟೋಪಿ ಎಂಎಲ್‌ಎ ಇಲ್ಲಿ ಬಾರಪ್ಪ ಎಂದು ಕರೆದು ಆರ್‌ಎಸ್‌ಎಸ್‌ಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹಾಕಿದರು.

error: Content is protected !!
Scroll to Top