ನಿಷೇಧಿತ ಪಿಎಫ್‌ಐ ಪರ ಪ್ರಚಾರ : ಕಡಬದ ವ್ಯಕ್ತಿ ಸೆರೆ

ಸೋಷಿಯಲ್‌ ಮೀಡಿಯಾದಲ್ಲಿ ನಿರಂತರ ಪ್ರಚಾರ ಮಾಡುತ್ತಿದ್ದ ಆರೋಪಿ

ಮಂಗಳೂರು : ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಬೀಜತ್ತಳಿ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ (55) ಬಂಧಿತ ಆರೋಪಿ.

2022ರಲ್ಲಿ ಕೇಂದ್ರ ಸರ್ಕಾರ ಪಿಎಫ್‌ಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದೆ. ನಿಷೇಧದ ಹೊರತಾಗಿಯೂ ಆರೋಪಿ ಸಂಘಟನೆಯ ಪರ ಪ್ರಚಾರ ನಡೆಸಿ ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.





















































 
 

ಪೊಲೀಸರು ಆರೋಪಿಯನ್ನು ಗುರುವಾರ ಮಂಗಳೂರಿನ ಉರ್ವ ಸ್ಟೋರ್ಸ್ ಬಳಿ ಬಂಧಿಸಿ ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆತನನ್ನು ನಂತರ 49ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಬೆಂಗಳೂರಿನ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಅಕ್ಟೋಬರ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top