ದಲಿತ ಯುವಕನನನ್ನು ಮದುವೆಯಾದದ್ದಕ್ಕೆ ತುಂಬು ಗರ್ಭಿಣಿ ತಂಗಿಯನ್ನು ಜೀವಂತ ದಹಿಸಿದ್ದ ಸಹೋದರರು
ಬೆಂಗಳೂರು : ದಲಿತ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದ ಸಹೋದರಿಯನ್ನು ಜೀವಂತ ಸುಟ್ಟುಕೊಂದಿದ್ದ ವಿಜಯಪುರದ ಮರ್ಯಾದ ಹತ್ಯೆ ಪ್ರಕರಣದ ಇಬ್ಬರು ಸಹೋದರರಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮರ್ಯಾದೆ ಹತ್ಯೆಗೈದ ಇಬ್ಬರು ಸಹೋದರರಿಗೆ ಮರಣದಂಡನೆ, ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ ಲಾರಿ ಚಾಲಕ ಅಕ್ಬರ್ (28) ಮರಣ ದಂಡನೆ ಶಿಕ್ಷೆಗೊಳಗಾದವರು. ದಲಿತ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಅಣ್ಣತಮ್ಮಂದಿರಿಬ್ಬರು ತಮ್ಮ ತಂಗಿಯನ್ನೇ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದರು.
ಸಾಯಿಬಣ್ಣ ಎನ್ನುವ ದಲಿತ ಯುವಕನನ್ನು ಬಾನು ಬೇಗಂ ಪ್ರೀತಿಸಿ ಮದುವೆಯಾಗಿದ್ದಳು. ಇದನ್ನ ಸಹಿಸದ ಸಹೋದರರು ಬಾನು ಬೇಗಂ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಸಂರ್ಭದಲ್ಲಿ ಆಕೆಗೆ ಬೆಂಕಿ ಹಚ್ಚಿ ಸಜೀವವಾಗಿ ಕೊಂದು ಹಾಕಿದ್ದರು. 2017ರಲ್ಲಿ ವಿಜಯಪುರದಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು.
ಈ ಮೊದಲು ವಿಚಾರಣೆ ನಡೆಸಿದ್ದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಈ ತೀರ್ಪುನ್ನು ಎತ್ತಿ ಹಿಡಿದಿದೆ. ಕೊಲೆಯಾದ ಬಾನು ಬೇಗಂ ತಾಯಿ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
























