ಅಫಘಾನಿಸ್ತಾನ ವಿದೇಶಾಂಗ ಸಚಿವ ಭಾರತಕ್ಕೆ ಆಗಮನ

ಭಾರತದೊಂದಿಗೆ ಮಹತ್ವದ ಮಾತುಕತೆ ನಡೆಸಲಿರುವ ಸಚಿವ ಮುತ್ತಕಿ

ನವದೆಹಲಿ: ಅಫಘಾನಿಸ್ತಾನದ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಇಂದು ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಭಾರತಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಇದು ಐತಿಹಾಸಿಕ ಭೇಟಿ ಎನ್ನಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತ್ತಕಿ ಅವರಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. ಭದ್ರತಾ ಮಂಡಳಿ ಅ.9 ಮತ್ತು 16ರ ನಡುವೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್‌ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ.





















































 
 

ಜೂನ್‌ 2022ರಲ್ಲಿ ಹಿರಿಯ ರಾಜತಾಂತ್ರಿಕ ಜೆ.ಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿತ್ತು. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.

ಕೋವಿಡ್‌ ಸಮಯದಲ್ಲಿ ಅಫಘಾನಿಸ್ತಾನಕ್ಕೆ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
ಭಾರತ ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ನಂತರ ಮೇ 15ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

error: Content is protected !!
Scroll to Top