ಧಾರವಾಡ: ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆಯಲ್ಲೇ ಆಡಳಿತ ನಡೆಸುತ್ತಿದ್ದು, ಈಗ ಸರ್ಕಾರಿ ಕಾರ್ಯಕ್ರಮದಲ್ಲೇ ಕುರಾನ್ ಪಠಣಕ್ಕೆ ಅವಕಾಶ ನೀಡುವ ಮೂಲಕ ತಮ್ಮ ಧ್ಯೇಯವೇ ಮುಸ್ಲಿಂ ತುಷ್ಟೀಕರಣ ಎಂದು ಸಾರ್ವಜನಿಕರಿಗೆ ತೋರಿಸಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳಿಗೆ ಅದರದ್ದೇ ಆದ ರೀತಿ, ನೀತಿಗಳಿವೆ. ಆದರೆ ಹುಬ್ಬಳ್ಳಿಯ ವಿಶಾಲ್ ನಗರದಲ್ಲಿ ಇತ್ತೀಚೆಗೆ ಆಯೋಜನೆ ಮಾಡಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಒಂದು ವರ್ಗದ ಓಲೈಕೆಗಾಗಿ ನಿಯಮಗಳನ್ನು ಗಾಳಿಗೆ ತೂರಿರುವುದು ಆಕ್ಷೇಪಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ನೀಡಿದ್ದು ಸರಿಯಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹವುಗಳಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ದ ಸಚಿವರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದಕ್ಕೆ ಅವರೇ ಪ್ರೋತ್ಸಾಹ ನೀಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ರಾಜ್ಯದ ಹಿತ ಕಾಯಬೇಕಾದ ಸರ್ಕಾರ ಒಂದು ಮತದ ಓಲೈಕೆಗೆ ಮುಂದಾಗಿರುವುದು ದುರಾದೃಷ್ಟಕರ. ಇನ್ನಾದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿಯಮಗಳ ಪಾಲನೆಯಾಗಲಿ ಎಂದು ಅವರು ನುಡಿದಿದ್ದಾರೆ.
























