ರಸ್ತೆ ಬದಿ ನಿಂತು ಜನಸಾಮಾನ್ಯರಂತೆ ಊಟ ಮಾಡಿದ ಸೂಪರ್‌ಸ್ಟಾರ್
ಚೆನ್ನೈ : ಆಗಾಗ ಹಿಮಾಲಯದತ್ತ ಆಧ್ಯಾತ್ಮಿಕ ಪ್ರವಾಸ ಕೈಗೊಂಡು ಧ್ಯಾನ, ಪ್ರಾರ್ಥನೆ ಮಾಡಿ ಬರುವ ಹವ್ಯಾಸ ಇಟ್ಟುಕೊಂಡಿರುವ ಮೇರುನಟ ರಜನಿಕಾಂತ್ ಈ ಸಲ ಋಷಿಕೇಶಕ್ಕೆ ಹೋಗಿದ್ದಾರೆ. ರಜನಿಕಾಂತ್ ‘ಕೂಲಿ’ ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮಕ್ಕಾಗಿ ಋಷಿಕೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಅವರು ಸರಳವಾಗಿ ರಸ್ತೆ ಬದಿಯಲ್ಲಿ ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಜನಿಕಾಂತ್ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಧ್ಯಾನ ಮಾಡಿದ್ದಾರೆ.
ನಟ ರಜನಿಕಾಂತ್ ಅವರು ಸೂಪರ್ ಸ್ಟಾರ್, ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದಾಗ್ಯೂ ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ. ಬಿಳಿ ಮುಂಡು, ಅಂಗಿ ಧರಿಸಿ, ಶಾಲು ಹಾಕಿಕೊಂಡು ರಸ್ತೆ ಬದಿ ನಿಂತು ಎಲೆಯ ತಟ್ಟೆಯಲ್ಲಿ ಊಟ ಮಾಡುತ್ತಿರುವ ಅವರ ಈ ಹೊಸ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಜನಿಕಾಂತ್ ಪ್ರತಿ ಸಿನಿಮಾ ರಿಲೀಸ್ ಬಳಿಕ ಒಂದು ಆಧ್ಯಾತ್ಮಿಕ ಬ್ರೇಕ್ ಪಡೆಯುತ್ತಾರೆ. ಋಷಿಕೇಶ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳಿ ಕೆಲ ದಿನ ಇದ್ದು ಬರುತ್ತಾರೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಜನಿಕಾಂತ್ ಅವರು ಋಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸರಳ ಜೀವನ ನಡೆಸುತ್ತಿದ್ದಾರೆ.
ಉತ್ತರಾಖಾಂಡದ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ರಜನಿಕಾಂತ್ ಭೇಟಿ ನೀಡಿ ತಮ್ಮ ಅಧ್ಯಾತ್ಮ ಗುರುವಿಗೆ ನಮನ ಸಲ್ಲಿಸಿದ್ದಾರೆ. ಗಂಗಾ ನದಿಯ ಪಕ್ಕದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. ಗಂಗಾ ಆರತಿಯನ್ನು ಕಣ್ತುಂಬಿಕೊಂಡಿದ್ದಾರೆ. ಋಷಿಕೇಶದ ಬಳಿಕ ರಜನಿಕಾಂತ್ ದ್ವಾರಹಾತ್ಗೆ ತೆರಳಿದ್ದಾರೆ. ದಾರಿ ಮಧ್ಯೆ ನಿಂತು ಅವರು ಊಟ ಸವಿದಿದ್ದಾರೆ.
ರಜನಿಕಾಂತ್ ಋಷಿಕೇಶಕ್ಕೆ ತೆರಳುತ್ತಿರುವುದು ಇದೇ ಮೊದಲೇನು ಅಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಈ ಭಾಗಕ್ಕೆ ತೆರಳಿ ಧ್ಯಾನ ಮಾಡಿ ಬಂದಿದ್ದರು. ಆ ಸಮಯದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿದ್ದವು.
























