ಪ್ರಶ್ನೆಗಳನ್ನು ʼಸಿದ್ದʼಪಡಿಸಿರುವುದು ನಿಮ್ಮದೇ ಸರ್ಕಾರ ಎಂಬುದನ್ನು ಮರೆಯದಿರಿ ಎಂದು ಕಾಲೆಳೆದ ವಿಪಕ್ಷ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಜಾತಿ ಗಣತಿಯಲ್ಲಿ ಕೇಳುತ್ತಿರುವ ಪ್ರಶ್ನೆಗಳಿಗೆ ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಅಸಮಾಧಾನ ವ್ಯಕ್ತಪಡಿಸಿರುವುದು ಜಾತಿ ಗಣತಿಯನ್ನು ಟೀಕಿಸಲು ಬಿಜೆಪಿ ಪಾಲಿಗೆ ಹೊಸ ಅಸ್ತ್ರವೊಂದು ಸಿಕ್ಕಿದಂತಾಗಿದೆ.
ಆರಂಭದಿಂದಲೂ ಬಿಜೆಪಿ ಇದು ರಾಜಕೀಯ ಉದ್ದೇಶದ ಜಾತಿ ಗಣತಿ ಎಂದು ಟೀಕಿಸುತ್ತಿದೆ. ಸರ್ಕಾರ ಇದು ಜನರ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಈ ನಡುವೆ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಗಣತಿ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಗಣತಿದಾರರು ಕೇಳಿರುವ ನಾನಾ ರೀತಿಯ ಪ್ರಶ್ನೆಗಳು ಡಿಕೆಶಿಗೆ ಇರಿಸುಮುರಿಸು ಉಂಟು ಮಾಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಈ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದು ನಿಮ್ಮದೇ ಸರ್ಕಾರ ಎಂದು ಟಾಂಗ್ ನೀಡಿದೆ. ಡಿಸಿಎಂ ಡಿಕಶಿಯವರೇ ಜಾತಿ ಗಣತಿಯ ಪ್ರಶ್ನೆಗಳನ್ನು ʼಸಿದ್ದʼಪಡಿಸಿರುವುದು ನಿಮ್ಮದೇ ಸರ್ಕಾರ ಎಂಬುದನ್ನು ಮರೆಯದಿರಿ. ಗಣತಿದಾರರು ಕೇಳಿದ ಪ್ರಶ್ನೆಗಳಿಗೆ ಅವೆಲ್ಲ ಹೇಳಕ್ಕಾಗಲ್ಲ ಎಂದು ನೀವೇ ಹೇಳುವುದಾದರೆ ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಖರ್ಚು ಮಾಡಿ ಜಾತಿ ಗಣತಿ ನಡೆಸುವುದು ಯಾವ ಪುರುಷಾರ್ಥ ಸಾಧನೆಗೆ ಎಂದು ದಯವಿಟ್ಟು ತಿಳಿಸಿ ಎಂದು ಕಾಲೆಳೆದು ಬಿಜೆಪಿ ಟ್ವೀಟ್ ಮಾಡಿದೆ.
ಡಿಕೆಶಿ ಮನೆಯಲ್ಲಿ ಪತ್ನಿ ಉಷಾ ಜೊತೆ ಕುಳಿತು ಅಧಿಕಾರಿಗಳಿಗೆ ಜಾತಿ ಗಣತಿ ಮಾಹಿತಿ ನೀಡಿದ್ದು, ಈ ವೇಳೆ ಗಣತಿಯ ಒಟಿಪಿ ಯಾವ ಮೊಬೈಲ್‌ಗೆ ಬಂದಿದೆ ಎಂದು ಹುಡುಕಾಟ ನಡೆಸಿದರು. ಕೊನೆಗೆ ಒಟಿಪಿ ಬಂದಿರುವ ಮೊಬೈಲನ್ನು ಸಿಬ್ಬಂದಿಯೇ ಹುಡುಕಿ ತಂದುಕೊಟ್ಟರು. ಗಣತಿಯಲ್ಲಿ ಮಾಹಿತಿ ಸಂಗ್ರಹದ ದಾಖಲೆ ನೋಡಿ ಇಷ್ಟೊಂದು ಪ್ರಶ್ನೆಗಳು ಇದಾವಾ? ನಾನು ಫಾರಂ ನೋಡಿರಲಿಲ್ಲ, ಜನರಿಗೆ ಉತ್ತರಿಸಲು ಅಷ್ಟೆಲ್ಲ ತಾಳ್ಮೆ ಇರಲ್ಲ. ಪ್ರಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ ಸಿಂಪಲ್ ಮಾಡಿ ಇದಕ್ಕೆಲ್ಲ ಯಾರು ಉತ್ತರ ಕೊಡ್ತಾರೆ. ಕೋಳಿ, ದನ, ಕುರಿ, ಮೇಕೆ, ಜೇನು ಸಾಕಿದ್ಯಾ? ವಿಮೆ ಮಾಡಿದ್ಯಾ? ಎಲ್ಲ ಜನ ಉತ್ತರ ಕೊಡ್ತಾರಾ ನಡಿ ಅಂತಾರೆ ಎಂದು ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 22 ನಿಮಿಷದಲ್ಲಿ ಸರ್ವೆ ಆಗುತ್ತೆ ಅಂದ ಅಧಿಕಾರಿಗಳಿಗೆ ಮತ್ತೆ ನನ್ನ ಮನೆಯಲ್ಲೆ 1 ಗಂಟೆ ತಗೊಂಡ್ರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋಳಿ ಸಾಕಿದಿರಾ? ಮೀನು ಸಾಕಿದಿರಾ? ಬಂಗಾರ ಎಷ್ಟಿದೆ ಎಂದೆಲ್ಲ ಕೇಳದಂತೆ ಸೂಚಿಸಿದರು.
























