ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಸಚಿವ ಮಹದೇವಪ್ಪನವರ ಮೊಮ್ಮಗ ಪ್ರೇಮ
ಮೈಸೂರು: ದಸರಾ ಮೆರವಣಿಗೆಯ ವೇಳೆ ತೆರೆದ ಜೀಪಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಎಕ.ಶಿವಕುಮಾರ್ ಹಾಗೂ ಸಚಿವರ ಜೊತೆ ಸಚಿವ ಮಹದೇವಪ್ಪ ಅವರ ಮೊಮ್ಮಗ ಪ್ರಯಾಣಿಸಿದ್ದು ಭಾರಿ ಟೀಕೆಗೆ ಗುರಿಯಾಗಿದೆ. ಶಿಷ್ಟಾಚಾರ ಉಲ್ಲಂಘಿಸಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಚ್.ಸಿ.ಮಹದೇವಪ್ಪ ಮೊಮ್ಮಗನನ್ನು ಮೆರವಣಿಗೆಯಲ್ಲಿ ಕರೆದೊಯ್ದಿರುವುದರ ಕುರಿತು ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಧಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಕೆಲವು ಕಾಂಗ್ರೆಸ್ ನಾಯಕರು ಫೋಟೊ ಮತ್ತು ವಿಡಿಯೊ ಸಹಿತ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ ಎಂದು ತಿಳಿದು ಬಂದಿದೆ.
ಮಹದೇವಪ್ಪ ತಮ್ಮ ಮೊಮ್ಮಗನನ್ನು ಶಿಷ್ಟಾಚಾರ ಉಲ್ಲಂಘಿಸಿ ಮೆರವಣಿಗೆಯಲ್ಲಿ ಕರೆದೊಯ್ದಿದ್ದು, ಸಿಎಂ ಮತ್ತು ಡಿಸಿಎಂ ಇದ್ದ ತೆರೆದ ವಾಹನದಲ್ಲೂ ಮೊಮ್ಮಗನಿಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ. ಇದೇ ವರ್ಷ ಆರ್ಸಿಬಿ ವಿಜಯೋತ್ಸವ ಆಚರಣೆಗಾಗಿ ವಿಧಾನಸೌಧ ಆವರಣದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೊಮ್ಮಗ ಹಾಗೂ ಹಲವು ಸಚಿವರ ಮಕ್ಕಳು ಮತ್ತು ಕುಟುಂಬದವರು ಪಾಲ್ಗೊಂಡು ಶಿಷ್ಟಾಚಾರವನ್ನು ಗಾಳಿಗೆ ತೂರಿದ್ದು ದೊಡ್ಡ ವಿವಾದವಾಗಿತ್ತು.
ಈ ಬಾರಿಯ ದಸರಾ ಜಂಬೂ ಸವಾರಿಯ ಸಂದರ್ಭದಲ್ಲಿ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ನಂದಿ ಪೂಜೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದರು. ಅಲ್ಲಿಂದ ತೆರೆದ ಜೀಪ್ ಹತ್ತಿದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಹದೇವಪ್ಪ ಮುಂತಾದವರು ಅರಮನೆ ಆವರಣಕ್ಕೆ ತೆರಳಿದರು. ಅದೇ ಜೀಪಿನಲ್ಲಿ ಮಹದೇವಪ್ಪ ಹಾಗೂ ಅವರ ಮೊಮ್ಮಗ ಕೂಡ ಹತ್ತಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಇದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಾರಿಯ ಮೈಸೂರು ದಸರಾದಲ್ಲಿ ಪಾಸ್ಗಳನ್ನು ಮಾರಾಟ ಮಾಡಲಾಗಿದೆ. ಕೆಲವರು 6 ಸಾವಿರ ರೂ. ನೀಡಿ ಗೋಲ್ಡನ್ ಪಾಸ್ ಪಡೆದಿದ್ದರೂ ಅವರನ್ನು ಅರಮನೆ ಗೇಟ್ ಒಳಗೆ ಬಿಟ್ಟಿಲ್ಲ. ಅದಕ್ಕೆ ಕಾರಣ ಓವರ್ ಕ್ರೌಡ್. ಇದು ಹಲವರ ಸಿಟ್ಟಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಸಿಎಂ ಜೊತೆಗೆ ಮಹದೇವಪ್ಪ ಮೊಮ್ಮಗ ತೆರೆದ ಜೀಪ್ನಲ್ಲಿ ಓಡಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ದುಡ್ಡು ಕೊಟ್ಟು ಪಾಸ್ ಖರೀದಿಸಿದವರಿಗೆ ಪ್ರವೇಶವಿಲ್ಲ. ಆದರೆ ಸಚಿವರ ಮೊಮ್ಮಕ್ಕಳಿಗೆ ಮಾತ್ರ ಪುಕ್ಸಟ್ಟೆ ಪ್ರವೇಶ ಎಂಂಬ ಟೀಕೆ ವ್ಯಕ್ತವಾಗಿದೆ.
ಮಹದೇವಪ್ಪನವರು ತೆರೆದ ಜೀಪಿನ ಮೆರವಣಿಗೆಯಲ್ಲಿ ತಮ್ಮ ಮೊಮ್ಮಗನನ್ನೂ ಕರೆದುಕೊಂಡು ಹೋಗಿದ್ದು ಇದು ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ. ಇಂಥ ಮೆರವಣಿಗೆಗಳಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವವರು ಮಾತ್ರ ಪ್ರಯಾಣಿಸಬೇಕು. ಅದರಲ್ಲಿ ಅವರ ಕುಟುಂಬದ ವ್ಯಕ್ತಿಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ.
























