ಪುತ್ತೂರು : ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ರಜಾಕ್ (43) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 30ರಂದು ಉಪ್ಪಿನಂಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವಿನಾಶ್ ಎಚ್ ಮತ್ತು ಅವರ ತಂಡ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ರಜಾಕ್ ಸ್ವಲ್ಪ ಮುಂದೆ ವಾಹನ ಚಲಾಯಿಸಿ ಕಾರು ನಿಲ್ಲಿಸಿ ಓಡಿ ಪರಾರಿಯಾಗಲು ಪ್ರಯತ್ನಿಸಿದ್ದ.
ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಂಡಿಎಂಎ ಸೇವಿಸಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಾರನ್ನು ತಪಾಸಣೆ ನಡೆಸಿದ ಪೊಲೀಸರು 12.35 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ತಲಾ 10,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳು ಮತ್ತು ಅಪರಾಧಕ್ಕೆ ಬಳಸಲಾದ ಸುಮಾರು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























