ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ

ದೇಶ ವಿದೇಶಗಳಿಂದ ಜನ ಆಗಮನ-ಭಾರಿ ಪೊಲೀಸ್‌ ಬಂದೋಬಸ್ತು

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಮೈಸೂರು ಸಜ್ಜಾಗಿದ್ದು, ಐತಿಹಾಸಿಕ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿ ದಿನವಾದ ಗುರುವಾರ ನಡೆಯುವ ಐತಿಹಾಸಿಕ ವಿಜಯದಶಮಿ ಮೆರವಣಿಗೆಯನ್ನು ನೋಡಲು ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸಿದ್ದಾರೆ.

ಗುರುವಾರ ಮಧ್ಯಾಹ್ನ 1ರಿಂದ 1.18ರೊಳಗೆ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡುವರು. ಸಂಜೆ 4.42 ರಿಂದ 5.06ರೊಳಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ತರುವ ಶ್ರೀ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.





















































 
 

ಇದು 6ನೇ ಬಾರಿಗೆ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಜನರು ಸಮೃದ್ಧಿಯಾಗಿರುವ ಕಾರಣ ಅದ್ದೂರಿ ದಸರಾ ಮಹೋತ್ಸವ ಆಚರಿಸಲು ಸರ್ಕಾರ ತೀರ್ಮಾನಿಸಿ ಅದರಂತೆ ಕಾರ್ಯಕ್ರಮ ರೂಪಿಸಿತ್ತು

ವಿಜಯದಶಮಿ ಹಾಗೂ ಪಂಜಿನ ಕವಾಯತುಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ‌ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಲವು‌ ನಿಯಮಗಳನ್ನು ಜಾರಿ‌ ಮಾಡಿದೆ. ಈ‌ ಬಾರಿ ಕಡ್ಡಾಯವಾಗಿ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ನಿಗದಿತ ಪಾಸ್ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು.

ಕಾರ್ಯಕ್ರಮಕ್ಕೆ ಬರುವವರು ನಿಗದಿತ ಸ್ಥಳದಲ್ಲೇ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು. ಜಂಬೂ ಸವಾರಿ ಸಾಗುವ ರಸ್ತೆಯಲ್ಲಿ ಹಲವು ಶಿಥಿಲಗೊಂಡ ಕಟ್ಟಡಗಳಿದ್ದು ಈ ಬಾರಿ ಆ ಕಟ್ಟಡಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.‌ ಯಾರೂ ಕಟ್ಟಡಗಳ‌ ಮೇಲೆ‌ ಹತ್ತಬಾರದು. ಉಳಿದಂತೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ನೀಡುವ ಸಲಹೆ ಸೂಚನೆಯನ್ನು ತಪ್ಪದೆ ಪಾಲಿಸಬೇಕು. ಇದು ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಜನರಿಗೆ ದಸರಾ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ಕೆಲ ಕಾಲ್ತುಳಿತ ಅವಘಢ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ. ಅಲ್ಲದೇ ಒಳಭಾಗ ಪೊಲೀಸ್ ಭದ್ರತೆ ಕೂಡ ಹೆಚ್ಚು ಮಾಡಿದೆ. ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ದಸರಾ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ರಾಜಮನೆತನದ ಕುಟುಂಬಸ್ಥರು, ನ್ಯಾಯಾಧೀಶರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆ ನಂತರ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಅರಮನೆ ಪ್ರವೇಶ ನೀಡಲಿದ್ದಾರೆ. ಈಗಾಗಲೇ ನಗರ ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದ್ದು, ಅಂಬಾರಿ ಸಾಗುವ ರಾಜ ಮಾರ್ಗ ಸೇರಿದಂತೆ ನಗರ ವ್ಯಾಪ್ತಿ ಹೆಚ್ಚಿನ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿದ್ದು, ಅಂಬಾರಿ ಸಾಗುವಾಗ ಜನ ದಾಟಿ ರಸ್ತೆಗೆ ಬಾರದಂತೆ ಕ್ರಮ ವಹಿಸಲಾಗಿದೆ.

error: Content is protected !!
Scroll to Top