ಧರ್ಮಸ್ಥಳ ಪ್ರಕರಣ ಎಸ್‌ಐಟಿ ತನಿಖೆ ಶೀಘ್ರ ಮುಕ್ತಾಯ : ಪರಮೇಶ್ವರ್‌

ಶೀಘ್ರದಲ್ಲೇ ವರದಿ ಕೊಡಲು ಎಸ್‌ಐಟಿಗೆ ಸೂಚನೆ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಆದಷ್ಟು ಬೇಗ ಮುಕ್ತಾಯವಾಗಲಿದ್ದು, ಇಡೀ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಎಸ್‌ಐಟಿಗೆ ತಿಳಿಸಿದ್ದೇವೆ ಎಂಬುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಆದಷ್ಟು ಶೀಘ್ರದಲ್ಲಿ ಎಸ್‌ಐಟಿಯಿಂದ ತನಿಖಾ ವರದಿ ಪಡೆಯಲು ಸರ್ಕಾರ ನಿರ್ಧರಿಸಿದೆ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಿ ವರದಿ ಕೊಡಲು ಎಸ್‌ಐಟಿಗೆ ಹೇಳಿದ್ದೇವೆ. ಆದಷ್ಟು ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ ಎಸ್‌ಐಟಿಗೆ ತಿಳಿಸಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ಚಿನ್ನಯ್ಯನ ಪಿಐಎಲ್ ವಜಾ ಆದ ವಿಚಾರವನ್ನೂ ಎಸ್‌ಐಟಿಯವರು ವರದಿಯಲ್ಲಿ ಸೇರಿಸಿಯೇ ಕೊಡ್ತಾರೆ. ಹೊಸ ದೂರುಗಳು ಬಂದಿವೆ. ಹಲವರು ಹೇಳಿಕೆಗಳನ್ನು ಕೊಡ್ತಿದ್ದಾರೆ. ಇದಕ್ಕೆಲ್ಲ ಅಂತಿಮ ಹಾಡಲು ಹೇಳಿದ್ದೇವೆ ಎಂದು ಹೇಳಿದ್ದಾರೆ.





















































 
 

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗದ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಂಧನಕ್ಕೆ ಕಾನೂನು ತೊಡಕುಗಳು ಏನೇನಿದೆಯೋ ಅದರ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಇದರ ಬಗ್ಗೆ ಸರ್ಕಾರ ಎಸ್‌ಐಟಿಗೆ ಸೂಚನೆ ಕೊಡಕ್ಕಾಗಲ್ಲ. ಅಂತಿಮವಾಗಿ ಎಸ್‌ಐಟಿಯವರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ಗಡಿಪಾರು ಆದೇಶಕ್ಕೆ ತಡೆ

ಈ ನಡುವೆ ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ರಜಾಕಾಲದ ನ್ಯಾಯಪೀಠದ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ತಿಮರೋಡಿ ಅವರ ಗಡಿಪಾರು ಆದೇಶ ಜಾರಿಗೆ ಅಕ್ಟೋಬರ್ 8ರ ವರೆಗೆ ಮಧ್ಯಂತರ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಪುತ್ತೂರು ಸಹಾಯಕ ಆಯುಕ್ತರು, ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಇನ್ನೊಂದು ಬೆಳವಣಿಗೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ತನ್ನ ವಿರುದ್ಧ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅ.4ಕ್ಕೆ ಮುಂದೂಡಿದೆ.

ಮಂಗಳವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ನ್ಯಾಯಾಧೀಶರಾದ ಬಸವರಾಜ್ ವಿಚಾರಣೆ ನಡೆಸಿದರು. ಈ ವೇಳೆ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದರು.
ಅಪರಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಾಗ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ವಾದ ಮಂಡಿಸಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿದರು.

ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಯಾವುದೇ ಪ್ರಾಥಮಿಕ ಸಾಕ್ಷ್ಯವಿಲ್ಲದೆ ಪ್ರಕರಣವನ್ನು ದಾಖಲಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಸಂಪೂರ್ಣ ವಿವರಗಳನ್ನು ದೂರಿನಲ್ಲಿ ನಮೂದಿಸಲಾಗಿಲ್ಲ. ವಶಪಡಿಸಿಕೊಂಡ ತಲವಾರುಗಳ ಸ್ಥಿತಿ, ಬಂದೂಕಿನ ಸ್ಥಿತಿಯನ್ನು ವಿವರಿಸಲಾಗಿಲ್ಲ. ಕೆಲವು ಶಸ್ತ್ರಾಸ್ತ್ರಗಳನ್ನು ಕಾನೂನಿನಡಿಯಲ್ಲಿ ಅನುಮತಿ ಪಡೆಯುವುದರಿಂದ ವಿನಾಯಿತಿ ಇದೆ. ಶಸ್ತ್ರಾಸ್ತ್ರಗಳ ಸರಿಯಾದ ವಿವರಣೆಯಿಲ್ಲದೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

error: Content is protected !!
Scroll to Top