ಯುವ ಜನತೆಗೆ ರಾಜ್ಯ ಸರ್ಕಾರದಿಂದ ದಸರಾ ಗಿಫ್ಟ್
ಬೆಂಗಳೂರು: ಸಿವಿಲ್ ನೇರ ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸುವ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿ ಯುವಕರಿಗೆ ಸರ್ಕಾರ ದಸರಾ ಗಿಫ್ಟ್ ನೀಡಿದೆ.
ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಯುವ ಸಮೂಹ 5 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಪಿಎಸ್‌ಐ/ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಜೆನ್ ಜಿ ಮಾದರಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಇದರ ಮಧ್ಯೆ ಇದೇ ತಿಂಗಳ 6ರಂದು ರಾಜ್ಯ ಸರ್ಕಾರ ಸಿವಿಲ್ ಹುದ್ದೆಗಳ ನೇರ ನೇಮಕಾತಿಗಳಿಗೆ 2 ವರ್ಷ ಸಡಿಲಿಕೆ ಮಾಡಿ ಆದೇಶಿಸಿತ್ತು.
5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಸರ್ಕಾರ ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ. ಈ ವಯೋಮಿತಿ ಸಡಿಲಿಕೆ 2027ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಒಂದು ಬಾರಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.
2019ರಿಂದಲೂ ಕೋವಿಡ್ ಹಾಗೂ ಮತ್ತಿತರ ಕಾರಣಗಳಿಂದ ನೇರ ನೇಮಕಾತಿಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದರೂ ನೇಮಕಾತಿ ಆದೇಶ ಇನ್ನೂ ನೀಡಿಲ್ಲ. ಇದರಿಂದ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿರುವ ಲಕ್ಷಾಂತರ ಯುವಕರು ವಯೋಮಿತಿ ಮೀರುತ್ತಿರುವ ಹಿನನೆಲೆಯಲ್ಲಿ ಆತಂಕಗೊಂಡಿದ್ದರು.
ವಯೋಮಿತಿ ಸಡಿಲಿಕೆ ಎಷ್ಟು?
- ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
- ಒಬಿಸಿ – 38 ವರ್ಷದಿಂದ 41 ವರ್ಷ
- ಎಸ್‌ಸಿ/ಎಸ್‌ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ
























