ಅಪ್ರಾಪ್ತ ವಯಸ್ಸಿನ ಬಾಲಕನೇ ಚಿನ್ನದ ಗಟ್ಟಿ ದರೋಡೆಯ ಸೂತ್ರಧಾರ

ಮಂಗಳೂರಿನಲ್ಲಿ ನಡೆದ ದರೋಡೆ ಕೃತ್ಯ ಭೇದಿಸಿದ ಪೊಲೀಸರು, 5 ಮಂದಿ ಸೆರೆ

ಮಂಗಳೂರು : ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರ ಕೆಲಸಗಾರ ಮುಸ್ತಾಫ ಎಂಬವವರನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಐವರು ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಈ ಬಾಲಕನೇ ಇಡೀ ದರೋಡೆ ಕೃತ್ಯದ ಸೂತ್ರಧಾರಿ ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ತಿಳಿದುಬಂದಿದೆ.

ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್ ನಿವಾಸಿ ಫಾರಿಶ್(18), ಉಳ್ಳಾಲದ ಮುಕ್ಕಚೇರಿ ನಿವಾಸಿ ಸಫ್ವಾನ್(23), ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲದ ದರ್ಗಾದ ಹತ್ತಿರ ನಿವಾಸಿ ಫರಾಝ್(19) ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕ ಸೆರೆಯಾದವರು. ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





















































 
 

ಸೆ.26ರ ರಾತ್ರಿ 8.30ರ ವೇಳೆಗೆ ಮುಸ್ತಾಫ ಸ್ಕೂಟರ್ ಸೀಟಿನ ಅಡಿಯಲ್ಲಿ 1,650 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಗಳೂರು ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರೊಂದರಲ್ಲಿ ಬಂದು ತಡೆದು ನಿಲ್ಲಿಸಿದ್ದಾರೆ. ಇದೇ ವೇಳೆಗೆ ಉಳಿದ ಆರೋಪಿಗಳು ಕಾರೊಂದರಲ್ಲಿ ಬಂದು ಮುಸ್ತಾಫರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಸೆರೆಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕ ಮಂಗಳೂರು ಹಂಪನಕಟ್ಟೆಯಲ್ಲಿರುವ ಇದೇ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವನು. ಇದೇ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಫಾರಿಶ್ ಎಂಬಾತನಿಗೆ ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿ ನೀಡುವಂತೆ ತಿಳಿಸಿದ್ದ. ಈ ಹಿನ್ನೆಲೆ ಸೆ.26ರ ರಾತ್ರಿ 8.30ಕ್ಕೆ ಮುಸ್ತಾಫ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅವರ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್‌ನಿಗೆ ನೀಡಿದ್ದ. ಅದರಂತೆ ಈ ಆರೋಪಿಗಳು ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಪೂರ್ವಯೋಜಿತ ಸಂಚು ರೂಪಿಸಿದ್ದರು.

ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದು, ಮುಸ್ತಾಫ ತನ್ನ ಸ್ಕೂಟರಿನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದರು. ಇದೇ ವೇಳೆಗೆ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರಲ್ಲಿ ಬಂದು ಮುಸ್ತಾಫ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಮಂಗಳೂರು ಎಕ್ಕೂರು ಎಂಬಲ್ಲಿ ಅವರನ್ನು ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು.

error: Content is protected !!
Scroll to Top