ಸೋತ ದುಃಖ, ಅವಮಾನದಿಂದ ಕಂಗೆಟ್ಟು ಹೋಗಿರುವ ಪಾಕಿಸ್ತಾನೀಯರು
ದುಬೈ: ಏಷ್ಯಾ ಕಪ್ 2025ರ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಭಾನುವಾರ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ ಈ ಐತಿಹಾಸಿಕ ಗೆಲುವಿನ ನಂತರ ನಡೆದಿದ್ದು ಮಾತ್ರ ಭಾರಿ ನಾಟಕೀಯ ಬೆಳವಣಿಗೆ. ಭಾರತೀಯ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಕಾರಣ ಅವರು ಟ್ರೋಫಿ ಮತ್ತು ವಿಜೇತರ ಪದಕಗಳೊಂದಿಗೆ ಕ್ರೀಡಾಂಗಣದಿಂದ ಹೊರನಡೆದಿದ್ದಾರೆ.
ಅವರು ಟ್ರೋಫಿಯೊಂದಿಗೆ ತಾನು ಉಳಿದುಕೊಂಡಿದ್ದ ಹೋಟೆಲ್ಗೆ ಹೋಗಿದ್ದಾರೆ ಎನ್ನಲಾಗಿದೆ. ನಖ್ವಿಯ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿರುವುದು ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹಿಗ್ಗಾಮುಗ್ಗಾ ಟ್ರೋಲ್ಗೆ ಗುರಿಯಾಗಿದ್ದಾರೆ. ನಖ್ವಿ ಟ್ರೋಫಿ ಜೊತೆ ಹೀಟೆಲ್ನಲ್ಲಿ ಮಲಗಿರುವ , ಕಪ್ ಎತ್ತಿಕೊಂಡು ಓಡಿಹೋಗುತ್ತಿರವ ರೀತಿಯ ನಾನಾ ರೀತಿಯ ಮೀಮ್ಸ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಡೀ ಜಗತ್ತಿನ ಎದುರು ಪಾಕಿಸ್ತಾನ ಲೇವಡಿಗೆ ಗುರಿಯಾಗಿದೆ.
ಎಸಿಸಿ ಅಧ್ಯಕ್ಷರ ಕೈಯಿಂದ ಟ್ರೋಪಿ ಪಡೆಯಲು ನಿರಾಕರಿಸಿದ ಭಾರತ ತಂಡದ ನಿರ್ಧಾರದ ನಂತರವೂ ಟ್ರೋಫಿಯನ್ನು ಬೇರೊಬ್ಬರ ಮೂಲಕ ವಿಜೇತರಿಗೆ ನೀಡಬಹುದಿತ್ತು. ಆದರೆ ಎಸಿಸಿ ಅಧ್ಯಕ್ಷರು ಟ್ರೋಫಿಯನ್ನೇ ತೆಗೆದುಕೊಂಡು ಹೋಗಿದ್ದು ಇಡೀ ಕ್ರಿಕೆಟ್ ಜಗತ್ತನ್ನೇ ದಿಗ್ಭ್ರಮೆಗೊಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಸ್ಪಷ್ಟ ಕಾರಣವನ್ನು ನೀಡಿದ್ದಾರೆ. ನಮ್ಮ ದೇಶದ ವಿರುದ್ಧ ಯುದ್ಧವನ್ನು ಮಾಡುತ್ತಿರುವ ದೇಶದ ಪ್ರತಿನಿಧಿಯಿಂದ ನಾವು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಸಶಸ್ತ್ರ ಪಡೆಗಳಿಗೆ ನಾವು ಸಲ್ಲಿಸುವ ಗೌರವ ಎಂದಿರುವ ಅವರು, ಹೀಗಾಗಿ ನಾವು ಟ್ರೋಫಿಯನ್ನು ನಿರಾಕರಿಸಿದೆವು ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ನಿರಾಕರಿಸಿದೆವು ಎಂದ ಮಾತ್ರಕ್ಕೆ, ಆ ಮಹಾಶಯರು ನಮ್ಮ ದೇಶಕ್ಕೆ ಸಲ್ಲಬೇಕಾದ ಟ್ರೋಫಿ ಮತ್ತು ಪದಕಗಳನ್ನು ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇದು ಸಂಪೂರ್ಣವಾಗಿ ಅನಿರೀಕ್ಷಿತ ಮತ್ತು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆಯಾಗಿದೆ. ಅವರು ಆದಷ್ಟು ಬೇಗ ಟ್ರೋಫಿಯನ್ನು ಭಾರತಕ್ಕೆ ಕಳುಹಿಸುವ ಮೂಲಕ ನೈತಿಕತೆಯನ್ನು ಪ್ರದರ್ಶಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಸೈಕಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆ ವ್ಯಕ್ತಿಯ ವರ್ತನೆಯ ವಿರುದ್ಧ ನಾವು ತೀವ್ರ ಪ್ರತಿಭಟನೆ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಾಲ್ಪನಿಕ ಟ್ರೋಫಿಯೊಂದಿಗೆ ಸಂಭ್ರಮಾಚರಣೆ
ಪ್ರಶಸ್ತಿ ಪ್ರದಾನ ಸಮಾರಂಭ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಪಾಕಿಸ್ತಾನ ತಂಡ ಸೋಲಿನ ನಂತರ ತಮ್ಮ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದು ಹೊರಗೆ ಬರಲೇ ಇಲ್ಲ. ಭಾರತೀಯ ಆಟಗಾರರು ತಾಳ್ಮೆಯಿಂದ ಕಾಯುತ್ತಲೇ ಇದ್ದರು. ಕೊನೆಗೆ ಟ್ರೋಫಿ ಬರುವುದಿಲ್ಲ ಎಂದು ಖಚಿತವಾದಾಗ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಂಡದ ಸದಸ್ಯರು ಪೋಡಿಯಂ ಮೇಲೆ ಕಾಲ್ಪನಿಕ ಟ್ರೋಫಿಯೊಂದಿಗೆ ಸಂಭ್ರಮಾಚರಣೆ ನಡೆಸಿದರು. 2024ರ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಸಂಭ್ರಮಿಸಿದ ರೀತಿಯಲ್ಲೇ ಸೂರ್ಯಕುಮಾರ್ ಯಾದವ್ ಕಾಲ್ಪನಿಕ ಟ್ರೋಫಿಯನ್ನು ಎತ್ತಿ ಹಿಡಿದು ಆಚರಿಸಿದ್ದು ವಿಶೇಷವಾಗಿತ್ತು.
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್, ಕಷ್ಟಪಟ್ಟು ಗಳಿಸಿದ ಟ್ರೋಫಿಯನ್ನು ಚಾಂಪಿಯನ್ ತಂಡಕ್ಕೆ ನಿರಾಕರಿಸುವುದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಎಸಿಸಿಯ ನಡೆಯನ್ನು ಖಂಡಿಸಿದರು. ಅಭಿಷೇಕ್ ಶರ್ಮಾ ಕೂಡ ನಮಗೂ ಒಂದು ಟ್ರೋಫಿ ಸಿಕ್ಕಿದೆ, ಅದನ್ನು ಸೂರ್ಯ ಭಾಯ್ ತಂದಿದ್ದಾರೆ! ನಮಗೆ ಅದರ ತೂಕದ ಅನುಭವವಾಯಿತು ಎಂದು ವ್ಯಂಗ್ಯವಾಡಿದ್ದಾರೆ.
























