ಮಂಗಳೂರಿನಲ್ಲಿ ಮಾರಾಟ ಮಾಡುವ ಸಲುವಾಗಿ ಗಾಂಜಾ ತಂದು ಸಂಗ್ರಹಿಸಿಟ್ಟಿದ್ದ ವಿದ್ಯಾರ್ಥಿಗಳು
ಮಂಗಳೂರು: ಗಾಂಜಾ ಸಂಗ್ರಹಿಸಿದ ಮತ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಕೇರಳದ 11 ವಿದ್ಯಾರ್ಥಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳೆಲ್ಲ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳು. ಎಲ್ಲ ಆರೋಪಿಗಳು ಕಾಲೇಜು ಅಧ್ಯಯನಕ್ಕಾಗಿ ನಗರದಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ವೈತ್ ಶ್ರೀಕಾಂತ್, ಮುಹಮ್ಮದ್ ಆಫ್ಸಿನ್, ಮುಹಮ್ಮದ್ ಸ್ಮಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ, ಮುಹಮ್ಮದ್ ಹನನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮೊಹಮ್ಮದ್ ಜಾಸೀಲ್ ವಿ ಮತ್ತು ಸಿದಾನ್ ಪಿ ಆರೋಪಿಗಳು ಎಂದು ಗುರುತಿಸಲಾಗಿದೆ.
ಖಚಿತ ಸುಳಿವಿನ ಮೇರೆಗೆ ಪಿಎಸ್ಐ ಶೀತಲ್ ಅಲಗೂರ್ ನೇತೃತ್ವದ ಮಂಗಳೂರು ದಕ್ಷಿಣ ಪೊಲೀಸರ ತಂಡ ಗುರುವಾರ ಸಂಜೆ ಅತ್ತಾವರದ ಕಾಪ್ರಿಗುಡ್ಡೆ ಮಸೀದಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ 12.26 ಕೆಜಿ ಗಾಂಜಾ ಪತ್ತೆಯಾಗಿದ್ದು, ಇದನ್ನು ಒಡಿಶಾದಿಂದ ತರಲಾಗಿದೆ. ಬಳಿಕ ಇದನ್ನು ಏಳು ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿಟ್ಟಿದ್ದರು. ಪ್ಯಾಕೇಜಿಂಗ್‌ನ ಪ್ರಮಾಣ ಮತ್ತು ವಿಧಾನವು ಮಾರಾಟ ಮಾಡಲು ಪ್ರಯತ್ನಿಸಲಾಗಿದೆ ಎಂದು ಸೂಚಿಸುತ್ತದೆ. ವಶಪಡಿಸಿಕೊಂಡ ವಸ್ತುವಿನ ಮೌಲ್ಯ ಸುಮಾರು 2.45 ಲಕ್ಷ ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ 2,000 ರೂ. ಮೌಲ್ಯದ ತೂಕದ ಯಂತ್ರಗಳು ಮತ್ತು 1.05 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ 3.52 ಲಕ್ಷ ರೂ.
























