ನೂಕು ನುಗ್ಗಲು ಸಂಭವಿಸಲು ಕಾರಣ ಬಹಿರಂಗಪಡಿಸಿದ ಪ್ರಾಥಮಿಕ ತನಿಖೆ
ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯ ರ‍್ಯಾಲಿಯಲ್ಲಿ ಭೀಕರ ಕಾಲ್ತುಳೀತ ಸಂಭವಿಸಲು ಮಿತಿಗಿಂತ ಹಲವು ಪಟ್ಟು ಜನರು ಸೇರಿದ್ದೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಮಾರು 10 ಸಾವಿರ ಜನರು ಸೇರಿಸಲು ಅನುಮತಿ ಪಡೆಯಲಾಗಿತ್ತು. ಮೈದಾನದಲ್ಲಿ ಗರಿಷ್ಠ ಎಂದರೆ 50 ಸಾವಿರ ಜನರು ಹಿಡಿಸಬಹುದು. ಆದರೆ ಗಾಗಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರು ಹಾಗೂ ಅವರೆಲ್ಲ ಸತತ 7 ಗಂಟೆ ಕಾದು ಕುಳಿತು ಬಸವಳಿದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಕಾಲ್ತುಳಿತದಲ್ಲಿ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ವಿಜಯ ಮಧ್ಯಾಹ್ನದ ಹೊತ್ತಿಗೆ ಕರೂರಿಗೆ ತಲುಪಬೇಕಿತ್ತು. ಆದರೆ 7 ಗಂಟೆ ತಡವಾಗಿ ಬಂದ ಕಾರಣ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ. ನಟ ಸ್ಥಳಕ್ಕೆ ಬರುತ್ತಿದ್ದಂತೆ ಜನರ ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದು, ಇದರಿಂದ ಜನರು ಸ್ಥಳದಲ್ಲೇ ಮೂರ್ಚೆ ಹೋಗಲಾರಂಭಿಸಿದರು. ಇದನ್ನು ಗಮನಸಿದ ನಟ ಕೂಡಲೇ ತಮ್ಮ ಭಾಷಣ ನಿಲ್ಲಿಸಿ, ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಬಾಟಲಿ ಎಸೆಯುತ್ತಿದ್ದ ನಟ ವಿಜಯ್ ಹತ್ತಿರಕ್ಕೆ ಜನರು ಹೋಗಲು ಪ್ರಾರಂಭಿಸಿದ್ದು, ಈ ವೇಳೆ ಒಂದು ಭಾಗದ ಜನರ ನಡುವೆ ಕಾಲ್ತುಳಿತ ಸಂಭವಿಸಿದೆ. ಪರಿಣಾಮ 38 ಮಂದಿ ಸಾವನ್ನಪ್ಪಿದ್ದಾರೆ.
ತಮಿಳು ಚಿತ್ರರಂಗದ ಜನಪ್ರಿಯ ಹೀರೊ ಆಗಿದ್ದ ವಿಜಯ್ ರಾಜಕಾರಣಕ್ಕೆ ಪ್ರವೇಶಿಸಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷ ಕಟ್ಟಿಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜನಬೆಂಬಲ ಗಳಿಸುವ ಉದ್ದೇಶದಿಂದ ಈಗಾಗಲೇ ಪ್ರಚಾರ ಪ್ರಾರಂಭಿಸಿ ರಾಜ್ಯಾದ್ಯಾಂತ ಸರಣಿಯಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಅವರ ರಾಜಕೀಯ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಶನಿವಾರ ಕರೂರಿನಲ್ಲಿ ನಡೆದಿರುವುದು ಇಂಥದ್ದೇ ಒಂದು ಸಭೆ. ಆದರೆ ಸಭೆಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಅಮಾಯಕ ಜನರು ಸಾವಿಗೀಡಾಗಿದ್ದಾರೆ.
ಜನರು ಮೂರ್ಛೆ ತಪ್ಪಿದ ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿಜಯ್ ಅವರು ತಕ್ಷಣ ಆ್ಯಂಬುಲೆನ್ಸ್ ಅನ್ನು ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು. ಕಾಲ್ತುಳಿತದ ನಂತರ ವಿಜಯ್ ಅರ್ಧಕ್ಕೇ ತಮ್ಮ ಭಾಷಣವನ್ನು ಮುಗಿಸಿದ್ದಾರೆ. ಪೊಲೀಸರೇ, ದಯವಿಟ್ಟು ಸಹಾಯ ಮಾಡಿ ಎಂದು ವಿಜಯ್ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾರೂ ಗಾಬರಿಯಾಗಬೇಡಿ, ಈಗ ಆ್ಯಂಬುಲೆನ್ಸ್ ಬರುತ್ತದೆ ಎಂದು ಅವರು ಮೈಕ್ನಲ್ಲಿ ಹೇಳಿದ್ದಾರೆ.
ನ್ಯಾಯಾಂಗ ತನಿಖೆಗೆ ಆದೇಶ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಹಾಗೇ ಮೃತರ ಕುಟುಂಬಗಳಿಗೆ 10 ಲಕ್ಷ ರೂ., ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜನರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಈ ಘಟನೆಯ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಎಲ್ಲ ಆಸ್ಪತ್ರೆಗಳು ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸುವಂತೆ ಸ್ಟಾಲಿನ್ ನಿರ್ದೇಶನ ನೀಡಿದ್ದಾರೆ. ಸಚಿವರು ಮತ್ತು ಜಿಲ್ಲಾ ಅಧಿಕಾರಿಗಳು ಕರೂರ್‌ಗೆ ಧಾವಿಸಿದ್ದಾರೆ.
ಈ ದುರಂತ ಘಟನೆಯ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಈ ಆಘಾತಕಾರಿ ಸುದ್ದಿ ಕೇಳಿ ನನಗೆ ತೀವ್ರ ನೋವು ಮತ್ತು ದುಃಖವಾಗಿದೆ. ಜೀವಹಾನಿ ನಮ್ಮ ರಾಜ್ಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯ ಸಂದರ್ಭದಲ್ಲಿ ನಡೆದ ದುರದೃಷ್ಟಕರ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ದೇವರು ಶಕ್ತಿ ತುಂಬಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ಸಂಭವಿಸಿದ ದುರಂತ ಅಪಘಾತದಿಂದ ತೀವ್ರ ದುಃಖವಾಗಿದೆ. ಅಮಾಯಕರ ಜೀವ ಹಾನಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಮೃತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
























