ಗಣತಿ ಕಾರ್ಯದ ಅವ್ಯವಸ್ಥೆ ಸರಿಪಡಿಸುವಂತೆ ಗಣತಿದಾರ ಶಿಕ್ಷಕರಿಂದ ಪುತ್ತೂರಿನ ಬಿ.ಇ.ಒ.ಗೆ ಮನವಿ

ಪುತ್ತೂರು: ರಾಜ್ಯಾದ್ಯಂತ ಆರಂಭಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದು ಸೆ.25ರಂದು ಪುತ್ತೂರು ತಾಲೂಕಿನಲ್ಲಿ ಶಿಕ್ಷಕರು ಗಣತಿ ಕಾರ್ಯಕ್ಕೆ ಹೋಗದೆ ಹಲವಾರು ಶಿಕ್ಷಕರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಹಾಜರಾಗಿ ತಮ್ಮ ಗಣತಿ ಕಾರ್ಯದಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
3 ದಿನಗಳಲ್ಲಿ ಸಮೀಕ್ಷೆಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆ ಕಾರ್ಯ ನಡೆದಿಲ್ಲ. ಸಮೀಕ್ಷೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರೂಪಿಸಿದ ಆ್ಯಪ್ಗೆ ಕಾಡುತ್ತಿರುವ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ, ಸರಿಯಾದ ಮನೆ ಪಟ್ಟಿ ನೀಡದಿರುವುದು, ಮಹಿಳಾ ಗಣತಿದಾರರಿಗೆ ಸುರಕ್ಷತೆ ಇಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ಸರಿಪಡಿಸುವಂತೆ ಸುಮಾರು 200ರಷ್ಟು ಗಣತಿದಾರ ಶಿಕ್ಷಕರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ.ರವರಿಗೆ ಮನವಿ ನೀಡಿ ನೀಡಿದರು.

ಶಿಕ್ಷಕ ಶಿವಪ್ಪ ರಾಥೋಡ್ ಮಾತನಾಡಿ ನಾವು ಸರಕಾರಿ ನೌಕರರು. ಸರಕಾರದ ಕೆಲಸಕ್ಕೆ ಸಿದ್ಧರಾಗಿರುವವರು. ನಾವು ಸಮೀಕ್ಷೆ ಕಾರ್ಯ ಮಾಡುತ್ತೇವೆ. ಅದಕ್ಕೆ ಹಿಂಜರಿಯುವುದಿಲ್ಲ. ಆದರೆ ಗಣತಿ ಕೆಲಸಕ್ಕೆ ನಿಯೋಜನೆ ಮಾಡುವಾಗ ಸಮೀಕ್ಷೆಗೆ ಸಂಬಂಧಿಸಿದ ಇಲಾಖೆ ಗಣತಿದಾರರಿಗೆ ಸಮರ್ಪಕವಾದ ವ್ಯವಸ್ಥೆ ಮಾಡಬೇಕು. ನಮಗೆ ಕೇಂದ್ರ ಸ್ಥಾನದಲ್ಲಿಯೇ ಕೆಲಸ ಕೊಡಬೇಕು. ಬೇರೆ ಕಡೆಗೆ ನಮ್ಮನ್ನು ಗಣತಿಗೆ ಕಳುಹಿಸಿದರೆ ಸಮೀಕ್ಷೆ ಕಾರ್ಯ ಮಾಡಲು ಕಷ್ಟವಾಗುತ್ತದೆ. ನಮ್ಮಲ್ಲಿ ಮಹಿಳಾ ಗಣತಿದಾರರು ಇದ್ದಾರೆ. ಮಹಿಳೆಯವರು ಸಮೀಕ್ಷಗೆ ಒಬ್ಬಂಟಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು ಭಯದಿಂದಲೇ ಮನೆ ಮನೆಗೆ ತೆರಳಬೇಕಾಗುತ್ತದೆ. ಅನ್ಯ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜನೆ ಮಾಡುವಾಗ ನಮ್ಮ ಇಲಾಖೆಯ ಅಧಿಕಾರಿಗಳು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದರು. ಗಣತಿಯ ಆ್ಯಪ್ನಲ್ಲಿ ಮಾಹಿತಿ ಅಪ್ಲೋಡ್ ಮಾಡುವಾಗ ನೆಟ್ವರ್ಕ್ ಸಮಸ್ಯೆ ಎದುರಾಗುತ್ತದೆ. ನಮ್ಮ ಪ್ರದೇಶ ಗುಡ್ಡಗಾಡು ಆದ ಕಾರಣ ಮೊಬೈಲ್ ನೆಟ್ವರ್ಕ್ ಇರುವುದಿಲ್ಲ ಆದುದರಿಂದ ಆ್ಯಪ್ನ್ನು ಆಫ್ಲೈನ್ ಮಾಡಬೇಕು. ಶಿಕ್ಷಕರು ಪಾಠ ಮಾಡಲು ಮಾತ್ರ ಸೀಮಿತ ಎಂದು ಹೇಳುವ ಶಿಕ್ಷಣ ಇಲಾಖೆ ಬೇರೆ ಕಾರ್ಯಕ್ಕೆ ನಮ್ಮನ್ನು ಕಳುಹಿಸಿದರೆ ನಮಗೆ ಮುಂದೆ ಪಾಠ ಮಾಡಲು ಮನಸ್ಸಿಗೆ ತೊಂದರೆಯಾಗುತ್ತದೆ. ಅನ್ಯಕಾರ್ಯಕ್ಕೆ ನಿಯೋಜಿಸುವಾಗ ನಮಗೆ ಆ ಕಾರ್ಯದ ನೇಮಕಾತಿ ಆದೇಶ ಪತ್ರ ಇಷ್ಟರವರೆಗೆ ನೀಡಿಲ್ಲ. ಆದುದರಿಂದ ಆ್ಯಪ್ ಸಮಸ್ಯೆ ಪರಿಹರಿಸಬೇಕು. ದಿನಕ್ಕೊಂದರಂತೆ ಎಪಿಕೆ ಫೈಲ್ ಕಳುಹಿಸುವುದು ನಿಲ್ಲಿಸಬೇಕು. ಶಿಕ್ಷಕರಿಗೆ ಭದ್ರತೆ ವ್ಯವಸ್ಥೆ ಮಾಡಬೇಕು. ಗಣತಿ ಕಾರ್ಯದ ಆದೇಶ ಪತ್ರ ನೀಡಬೇಕು. ಗಣತಿ ಕಾರ್ಯಕ್ಕೆ ಸಂಬಂಧಿಸಿದ ಹಾಜರಾತಿ ನೀಡಬೇಕು. ಗಣತಿಯಲ್ಲಿ ಮಾರ್ಗದರ್ಶನ ನೀಡಲು ನಮ್ಮ ಮೇಲೆ ಮೇಲ್ವೀಚಾರಕರನ್ನು ನೇಮಕ ಮಾಡಬೇಕು. ಎಲ್ಲಾ ಗೊಂದಲಗಳನ್ನು ಸರಿಪಡಿಸಬೇಕು ಎಂದು ಹೇಳಿದರು.

ಗಣತಿ ಕಾರ್ಯದಲ್ಲಿ ಸಾಧ್ಯವಾದಷ್ಟು ಆಯಾ ಪ್ರದೇಶವನ್ನೇ ಶಿಕ್ಷಕರಿಗೆ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಸಮೀಕ್ಷೆಯಲ್ಲಿ ಕೆಲವು ಲೋಪ ದೋಷಗಳು ಇರಬಹುದು ಅದನ್ನು ತಹಶೀಲ್ದಾರ್ ಜತೆ ಸಮಾಲೋಚಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದರು.





















































 
 

ಶಿಕ್ಷಕ ರಾಮಣ್ಣ ರೈ,ನಾಗೇಶ್ ಪಾಟಾಳಿ, ಮಹಮ್ಮದ್ ಅಶ್ರಫ್, ರಾಕೇಶ್, ಗಿರೀಶ್ ಕೊಯಿಲ, ರಾಮಚಂದ್ರ ಗೌಡ, ಜುಲಿಯಾನ ಮೊರಾಸ್, ಮಂಜಪ್ಪ ಬಲ್ನಾಡು, ರಮೇಶ್ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!
Scroll to Top